ನವದೆಹಲಿ: ದಶಕಗಳ ಕಾಲ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಪ್ರಧಾನ ಪಾತ್ರ ವಹಿಸಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಣಿಜ್ಯ, ವಿದೇಶಾಂಗ, ಹಣಕಾಸು, ರಕ್ಷಣಾ ಸಚಿವ, ರಾಷ್ಟ್ರಪತಿಯಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಳೆದ ಹಲವು ದಿನಗಳ ಹಿಂದೆ ಅವರನ್ನು ಸೇನಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೆಲ ದಿನಗಳ ಹಿಂದೆ ಅವರು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಕೋಮಾಗೆ ಜಾರಿದ್ದರು. ಸೋಮವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ.
ನಾನು 2014ರಲ್ಲಿ ದೆಹಲಿಗೆ ಹೊಸಬನಾಗಿ ಬಂದೆ. ಮೊದಲನೇ ದಿನದಿಂದ ಪ್ರಣಬ್ ಮುಖರ್ಜಿ ಅವರ ಮಾರ್ಗದರ್ಶನ, ಬೆಂಬಲ ಮತ್ತು ಆಶೀರ್ವಾದವನ್ನು ಪಡೆದೆ. ಅವರೊಂದಿಗೆ ಮಾತನಾಡಲು ನಾನು ಯಾವಾಗಲೂ ಇಷ್ಟಪಡುತ್ತಿದ್ದೆ. ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಪ್ರಧಾನಿ ಸಾಂತ್ವನ ಹೇಳಿದ್ದಾರೆ. ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಭಾರತವು ಅನುಭವಿ ಮತ್ತು ಕಾಲಮಾನದ ನಾಯಕನನ್ನು ಕಳೆದುಕೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಜಿ ಅಧ್ಯಕ್ಷ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಭಾರತ ರತ್ನ ಪುರಸ್ಕೃತ ಪ್ರಣಬ್ ಮುಖರ್ಜಿ ಅವರು ಐದು ದಶಕಗಳ ಸಾರ್ವಜನಿಕ ಮತ್ತು ರಾಜಕೀಯ ಜೀವನದಲ್ಲಿ ಸೇತುವೆಯಂತಹ ಸಂಸ್ಥೆಯಾಗಿ ಸೇವೆಸಲ್ಲಿಸಿದ್ದರು. ಅವರ ಕಾರ್ಯವೈಖರಿ ಭಾರತದ ರಾಜಕೀಯ ಇತಿಹಾಸವನ್ನು ರೂಪಿಸಿದೆ. ಅವರ ನಿಧನದಿಂದ ಒಂದು ಯುಗವೇ ಅಂತ್ಯವಾಗಿದೆ. ನಾನು ಮೆಚ್ಚಿದ ಮತ್ತು ಅವರಿಂದ ಆಶೀರ್ವಾದಗಳನ್ನು ಸ್ವೀಕರಿಸುವ ಅದೃಷ್ಟಶಾಲಿಗಳಲ್ಲಿ ನಾನೂ ಒಬ್ಬ ರಾಜಕಾರಣಿ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಪ್ರಣಬ್ ದಾ ಅವರ ನಿಧನ ತೀವ್ರವಾದ ನೋವು ತಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಅದೃಷ್ಟ ನನ್ನದಾಗಿತ್ತು. ಅವರ ಸಮರ್ಪಣೆ ಮತ್ತು ದೃಷ್ಟಿಕೋನ ಅಳಿಸಲಾಗದಂತಹ ಗುರುತನ್ನು ಬಿಟ್ಟಿದ್ದಾರೆ. ಒಬ್ಬ ರಾಜಕಾರಣಿ ಮಾತ್ರವಲ್ಲದೆ ನಾನು ಅವರನ್ನು ನನ್ನ 'ದಾದಾ' ಎಂದು ಪ್ರೀತಿಯಿಂದ ಕರೆಯುತ್ತಿದ್ದೆ ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಸ್ಮರಿಸಿದ್ದಾರೆ.