ನವದೆಹಲಿ:ಕೊರೊನಾ ವೈರಸ್ನ ಬಿಕ್ಕಟ್ಟಿನ ಸಮಯದಲ್ಲಿ ಜಿಎಸ್ಟಿ ಪಾವತಿದಾರರಿಗೆ ಜಿಎಸ್ಟಿ ಫೈಲಿಂಗ್ ಸುಲಭಗೊಳಿಸುವ ಸಲುವಾಗಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಇಲಾಖೆಯು (ಸಿಬಿಐಸಿ) ಹೊಸ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದೆ. ಇನ್ನು ಕೇವಲ ಒಂದು ಎಸ್ಎಂಎಸ್ ಕಳುಹಿಸುವುದರ ಮೂಲಕ ತೆರಿಗೆದಾತರು Nil GST ಫೈಲ್ ಮಾಡಬಹುದಾಗಿದೆ.
ಸೋಮವಾರ ಜೂನ್ 8 ರಿಂದ ಜಾರಿಯಾಗಿರುವ ಈ ಹೊಸ ವ್ಯವಸ್ಥೆಯಲ್ಲಿ ಮಾಸಿಕ ಜಿಎಸ್ಟಿ ರಿಟರ್ನ್ನ GSTR-3B ಫಾರ್ಮ್ ಅನ್ನು ಒಂದು ಎಸ್ಎಂಎಸ್ ಮೂಲಕ ಸಲ್ಲಿಸಬಹುದು. ಅಂದರೆ GSTR-3B ರಿಟರ್ನ್ ಫೈಲ್ ಮಾಡಲು ಈಗ ತೆರಿಗೆದಾತರು ಜಿಎಸ್ಟಿ ಪೋರ್ಟಲ್ಗೆ ಲಾಗಿನ್ ಆಗುವುದು ಕಡ್ಡಾಯವಲ್ಲ.
"ಹೊಸ ವ್ಯವಸ್ಥೆಯಿಂದ 22 ಲಕ್ಷ ನೋಂದಾಯಿತ ತೆರಿಗೆದಾರರಿಗೆ ಜಿಎಸ್ಟಿ ಫೈಲಿಂಗ್ ನಿಯಮ ಪಾಲಿಸಲು ಅನುಕೂಲವಾಗಲಿದೆ. ಇವರು ಮಾಸಿಕ ಜಿಎಸ್ಟಿ ರಿಟರ್ನ್ ಫೈಲಿಂಗ್ಗೆ ಜಿಎಸ್ಟಿ ಪೋರ್ಟಲ್ಗೆ ಲಾಗಿನ್ ಆಗುವುದು ಇನ್ನು ಅಗತ್ಯವಿಲ್ಲ." ಎಂದು ಸಿಬಿಐಸಿ ಸುತ್ತೋಲೆಯಲ್ಲಿ ತಿಳಿಸಿದೆ.
ಎಸ್ಎಂಎಸ್ ಮೂಲಕ GSTR-3B ರಿಟರ್ನ್ ಫಾರ್ಮ್ ಸಲ್ಲಿಸುವ ವ್ಯವಸ್ಥೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯಗತಗೊಳಿಸಲಾಗಿದೆ. ಅಲ್ಲದೆ ತೆರಿಗೆದಾರರು ತಾವು ಎಸ್ಎಂಎಸ್ ಮೂಲಕ ಸಲ್ಲಿಸಿದ GSTR-3B ರಿಟರ್ನ್ ಫಾರ್ಮ್ ಯಶಸ್ವಿಯಾಗಿ ಸಲ್ಲಿಕೆಯಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಬಹುದು ಎಂದು ಸಿಬಿಐಸಿ ಹೇಳಿದೆ.
ಬಳಕೆದಾರರು ತಮ್ಮ GSTIN ಅಕೌಂಟಿಗೆ ಲಾಗಿನ್ ಮಾಡಿ Services>Returns>Track Return Status ಪುಟದಲ್ಲಿ ನಿಲ್ ಜಿಎಸ್ಟಿ ರಿಟರ್ನ್ ಯಶಸ್ವಿಯಾಗಿರುವ ಬಗ್ಗೆ ಪರಿಶೀಲಿಸಬಹುದಾಗಿದೆ.
GSTR-3B ರಿಟರ್ನ್ ಯಾರೆಲ್ಲ ಫೈಲ್ ಮಾಡಬಹುದು?
GSTR-3B ಇದೊಂದು ಸ್ವಯಂ ಘೋಷಿತ ಫಾರ್ಮ್ ಆಗಿದ್ದು, ಜಿಎಸ್ಟಿ ನೋಂದಣಿ ಮಾಡಿಕೊಂಡಿದ್ದು ಯಾವುದೇ ವ್ಯವಹಾರ ನಡೆಸಿಲ್ಲದವರೂ ಇದನ್ನು ಸಲ್ಲಿಸಬಹುದು. ಜಿಎಸ್ಟಿ ಅಡಿ ತೋರಿಸಲು ಯಾವುದೇ ವ್ಯವಹಾರಗಳಿರದವರು ಈ ಮೂಲಕ Nil GST ರಿಟರ್ನ್ ಫೈಲ್ ಮಾಡಬಹುದು. ಆದಾಗ್ಯೂ ಕಂಪೋಸಿಶನ್ ಡೀಲರ್ಸ್, ಇನ್ಪುಟ್ ಸರ್ವಿಸ್ ಡಿಸ್ಟ್ರಿಬ್ಯೂಟರ್ಸ್ ಮತ್ತು ನಾನ್ ರೆಸಿಡೆಂಟ್ ತೆರಿಗೆದಾತರು ಈ ವ್ಯವಸ್ಥೆಯನ್ನು ಬಳಸುವಂತಿಲ್ಲ.
ಪ್ರತಿಯೊಂದು ನೋಂದಾಯಿತ GSTN ಸಂಖ್ಯೆಗೆ ಪ್ರತಿ ತಿಂಗಳು ಪ್ರತ್ಯೇಕ GSTR-3B ಸಲ್ಲಿಸಬೇಕಿದ್ದು, ಇದನ್ನು ಪರಿಷ್ಕರಿಸಲು ಅವಕಾಶವಿಲ್ಲ.
Nil GST return ಫೈಲ್ ಮಾಡುವ ಸ್ಟೆಪ್-ಬೈ-ಸ್ಟೆಪ್ ಗೈಡ್
1. Nil GSTR-3B ರಿಟರ್ನ್ ಫೈಲ್ ಮಾಡಲು ಬಯಸುವ ಜಿಎಸ್ಟಿ ನೋಂದಾಯಿತರು ಫೋನಿನಲ್ಲಿ ಎಸ್ಎಂಎಸ್ ಸಂದೇಶ ಆಪ್ ತೆರೆದು ಅದರಲ್ಲಿ NIL ಎಂದು ಟೈಪ್ ಮಾಡಿ ಒಂದು ಜಾಗ ಬಿಟ್ಟು, 3B ಎಂದು ಬರೆದು ಮತ್ತೆ ಒಂದು ಜಾಗ ಬಿಟ್ಟು, GSTIN ಸಂಖ್ಯೆ ನಮೂದಿಸಿ ಮತ್ತೊಂದು ಜಾಗ ಬಿಟ್ಟು, MMYYYY ಮಾದರಿಯಲ್ಲಿ ರಿಟರ್ನ್ ಫೈಲ್ ಮಾಡುತ್ತಿರುವ ತಿಂಗಳು ಮತ್ತು ವರ್ಷವನ್ನು ನಮೂದಿಸಬೇಕು.
2. NIL<space>3B<space>GSTIN<space>Tax period ಈ ಮಾದರಿಯಲ್ಲಿ ಬರೆದಾಗ ಅದು ಹೀಗೆ ಕಾಣಿಸುತ್ತದೆ: ‘NIL 3B 09XXXXXXXXXXXZC 052020’ . ಈಗ ಎಸ್ಸೆಮ್ಮೆಸ್ ಅನ್ನು 14409 ಗೆ ಸೆಂಡ್ ಮಾಡಬೇಕು.
3. ಎಸ್ಸೆಮ್ಮೆಸ್ ಕಳುಹಿಸಿದ ನಂತರ ಬಳಕೆದಾರರಿಗೆ 6 ಅಂಕಿಯ ಕೋಡ್ ಬರುತ್ತದೆ ಹಾಗೂ ಇದು ಮುಂದಿನ ಅರ್ಧ ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. ಉದಾಹರಣೆಗೆ ಆ ಕೋಡ್ ಹೀಗೆ ಕಾಣಿಸುತ್ತದೆ: 123456 is the CODE for Nil filing of GSTR3B for09XXXXXXXXXXXZC for period 052020. Code validity 30 min.
ಎಸ್ಎಂಎಸ್ಮೂಲಕ ಕಳುಹಿಸಲಾದ Nil GST ರಿಟರ್ನ್ ಫೈಲಿಂಗ್ ಖಾತರಿಪಡಿಸಿಕೊಳ್ಳುವುದು ಹೇಗೆ?
ತಾನು ಕಳುಹಿಸಿದ Nil GST ರಿಟರ್ನ್ ಯಶಸ್ವಿಯಾಗಿದೆಯಾ ಅಥವಾ ಇಲ್ಲವಾ ಎಂಬುದನ್ನು ಮತ್ತೊಂದು ಎಸ್ಸೆಮ್ಮೆಸ್ ಕಳುಹಿಸುವ ಮೂಲಕ ಖಾತರಿಪಡಿಸಿಕೊಳ್ಳಬಹುದು. ಅದಕ್ಕಾಗಿ ಬಳಕೆದಾರರು ಈ ಮುಂದೆ ತಿಳಿಸಲಾದ ರೀತಿಯಲ್ಲಿ ಎಸ್ಸೆಮ್ಮೆಸ್ ಬರೆಯಬೇಕು: CNF <space>3B<space>Code, ಇದರಲ್ಲಿ ಬಳಕೆದಾರರು ತಮಗೆ ಬಂದ 6 ಅಂಕಿಯ ಕೋಡ್ ಅನ್ನು ನಮೂದಿಸಬೇಕು. ಆಗ ಬಳಕೆದಾರರ ಎಸ್ಎಂಎಸ್ ಹೀಗೆ ಕಾಣಿಸುತ್ತದೆ: CNF 3B 123456. ಈಗ ಇದನ್ನು ಮತ್ತೆ 14409 ಇದೇ ಸಂಖ್ಯೆಗೆ ಸೆಂಡ್ ಮಾಡಬೇಕು.