ಸ್ವಂತ ಕಾರಿನಲ್ಲಿ ಪ್ರಯಾಣಿಸುವುದು ಪ್ರತಿಯೊಬ್ಬರ ಕನಸು. ಆ ಕನಸನ್ನು ನನಸಾಗಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ತಮ್ಮ ಕಾರುಗಳಿಗೆ ವಿಮೆ ತೆಗೆದುಕೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಎಂದಾದರೂ ಒಮ್ಮೆ ಅಪಘಾತವಾದಾಗ ಮಾತ್ರ ವಿಮೆ ಮಾಡಿಸಿದ್ದರೆ, ಚೆನ್ನಾಗಿರ್ತಿತ್ತು ಎಂದು ಅಲವತ್ತುಕೊಳ್ಳುತ್ತಾರೆ. ಕೆಲವರು ಮುಂಜಾಗ್ರತಾ ಕ್ರಮವಾಗಿ ವಿಮೆ ಮಾಡಿಸಿದರೆ, ಇನ್ನೂ ಕೆಲವರು ಬೇರೆ ವ್ಯಕ್ತಿಗಳ ಮಾಡಿದ ತಪ್ಪನ್ನು ನೋಡಿ, ತಮ್ಮ ವಾಹನಗಳಿಗೆ ವಿಮೆ ಮಾಡಿಸುತ್ತಾರೆ.
ಕೋವಿಡ್ ನಂತರ, ಅನೇಕರು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಬಯಸುತ್ತಿದ್ದು, ಕಾರು ಖರೀದಿಸುವವರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಕಾನೂನಿನ ಪ್ರಕಾರ, ಪ್ರತಿ ವಾಹನಕ್ಕೂ ವಿಮೆ ಕಡ್ಡಾಯವಾಗಿದೆ.
ವಾಹನ ವಿಮೆಯ ವಿಧಗಳು:
ವಾಹನ ವಿಮೆಗಳಲ್ಲಿ ಸಮಗ್ರ ವಿಮೆ (Comprehensive Insurance) ಮತ್ತು ಮೂರನೇ ವ್ಯಕ್ತಿಯ ವಿಮೆ (Third Party Insurance) ಎಂಬ ಎರಡು ವಿಮೆಗಳಿವೆ. ವಾಹನವನ್ನು ರಸ್ತೆಗೆ ತರಬೇಕಾದರೆ ಈ Third Party Insurance ಕಡ್ಡಾಯ.
ಈಗ ವಾಹನ ವಿಮಾ ಪಾಲಿಸಿಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ನವೀಕರಣ ಮಾಡಲು ಬಯಸುತ್ತಾರೆ. ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ನವೀಕರಣ ಮಾಡುವವರಿಗೆ ಸಹಾಯ ಮಾಡಲೆಂದೇ ವಿಮಾ ಕಂಪನಿಗಳ ಹೆಲ್ಪ್ ಸೆಂಟರ್ಗಳು ಸಿದ್ಧವಾಗಿರುತ್ತವೆ. ಕಾರಿಗೆ ಹೊಸ ವಿಮಾ ಪಾಲಿಸಿ ತೆಗೆದುಕೊಳ್ಳುವಾಗ ಅಥವಾ ನವೀಕರಿಸುವಾಗ ತೆಗೆದುಕೊಳ್ಳುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ನಿಮ್ಮ ಆಯ್ಕೆ ಸಮಗ್ರ ವಿಮೆಯಾಗಿರಲಿ:
ಸಾಮಾನ್ಯವಾಗಿ ಜನರು ಕಡಿಮೆ ಪ್ರೀಮಿಯಂ ಇರುವ ಪಾಲಿಸಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಹಾಗೆ ಮಾಡುವುದರಿಂದ ಅನೇಕ ಅನಾನುಕೂಲಗಳಾಗುವ ಸಾಧ್ಯತೆ ಇರುತ್ತದೆ. ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನಂತರ ಸೂಕ್ತ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಬುದ್ದಿವಂತ ವಾಹನ ಚಾಲಕರ ಲಕ್ಷಣವಾಗಿದೆ.