ನವದೆಹಲಿ :ಕಳೆದ ನವೆಂಬರ್ ತಿಂಗಳೊಂದರಲ್ಲೇ 1,31,526 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಇದು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾದ ಬಳಿಕ ಸಂಗ್ರಹವಾದ 2ನೇ ಅತ್ಯಧಿಕ ಆದಾಯ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಇದರಲ್ಲಿ 23,978 ಕೋಟಿ ರೂಪಾಯಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ, 31,127 ಕೋಟಿ ರೂ. ರಾಜ್ಯ ಸರಕು ಮತ್ತು ಸೇವಾ ತೆರಿಗೆ ಪಾಲು, 66,815 ಕೋಟಿ ರೂ. ಅಂತಾರಾಷ್ಟ್ರೀಯ ಸರಕು ಮತ್ತು ಸೇವಾ ತೆರಿಗೆ, 32,165 ಕೋಟಿಗಳು ಆಮದಾದ ವಸ್ತುಗಳ ಮೇಲಿನ ತೆರಿಗೆ ಮತ್ತು 9,606 ಕೋಟಿ ರೂ. ಸರಕುಗಳ ಮೇಲಿನ ಸೆಸ್ನಿಂದ ಇಷ್ಟು ಪ್ರಮಾಣದ ಆದಾಯ ಹರಿದು ಬಂದಿದೆ ಎಂದು ಸಚಿವಾಲಯ ತಿಳಿಸಿದೆ.
ಇದು ದೇಶದಲ್ಲಿ ಜಿಎಸ್ಟಿ ಜಾರಿಯಾದ ಬಳಿಕ ಸಂಗ್ರಹವಾದ 2ನೇ ಅತ್ಯಧಿಕ ತೆರಿಗೆ ಆದಾಯ. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಸಂಗ್ರಹವಾದ ಆದಾಯಕ್ಕಿಂತಲೂ ಅಧಿಕವಾಗಿದೆ. ಅಲ್ಲದೇ, ಇದು ದೇಶದ ಆರ್ಥಿಕ ಚೇತರಿಕೆಯ ಲಕ್ಷಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಸತತ 2 ತಿಂಗಳು 1.30 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಈ ವರ್ಷದ ನವೆಂಬರ್ನಲ್ಲಿ ಸಂಗ್ರಹವಾದ ತೆರಿಗೆ, ಕಳೆದ ವರ್ಷದ ಇದೇ ತಿಂಗಳಲ್ಲಿನ ತೆರಿಗೆಗಿಂತಲೂ ಶೇ.25ರಷ್ಟು ಅಧಿಕ ಮತ್ತು ಆ ವರ್ಷದ ಶೇ.27ರಷ್ಟು ಜಾಸ್ತಿಯಾಗಿದೆ.
ಸರಕುಗಳ ಆಮದಿನಿಂದ ಬಂದ ಆದಾಯ ಶೇ.43ರಷ್ಟು ಹೆಚ್ಚಳವಾಗಿದೆ. ದೇಶೀಯ ವಹಿವಾಟಿನಿಂದ(ಆಮದು ಸೇರಿ) ಕಳೆದ ವರ್ಷಕ್ಕಿಂತಲೂ ಶೇ.20ರಷ್ಟು ಹೆಚ್ಚಿನ ಆದಾಯ ಬಂದಿದೆ.
ಇದನ್ನೂ ಓದಿ: LPG ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಹೋಟೆಲ್ ಊಟ, ತಿಂಡಿ ದರ ಏರಿಕೆ ಸಾಧ್ಯತೆ
ತೆರಿಗೆ ಸಂಗ್ರಹ ನೀತಿಯಲ್ಲಾದ ಬದಲಾವಣೆ ಮತ್ತು ಆಡಳಿತಾತ್ಮಕ ಸುಧಾರಣೆಗಳಿಂದ ಹೆಚ್ಚಿನ ಆದಾಯ ಸಂಗ್ರಹವಾಗಲು ಕಾರಣ ಎಂದು ಸಚಿವಾಲಯ ಹೇಳಿಕೊಂಡಿದೆ. ಇನ್ನು ರಾಜ್ಯಗಳ ವಿಚಾರಕ್ಕೆ ಬಂದರೆ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ 18,656 ಕೋಟಿ ರೂ. ಸಂಗ್ರಹಿಸಿ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ 9,569 ಕೋಟಿ ರೂಪಾಯಿ, ಕರ್ನಾಟಕ 9,048 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿ ನಂತರದ ಸ್ಥಾನದಲ್ಲಿವೆ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ದಾಖಲೆಗಳಲ್ಲಿ ಉಲ್ಲೇಖವಾಗಿದೆ.