ನವದೆಹಲಿ: ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪ್ರಸ್ತುತ ಇರುವ ಕನಿಷ್ಠ ವಿದ್ಯಾರ್ಹತೆ ಮಾನದಂಡವನ್ನು ತೆರವುಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರ ಸಾರಿಗೆ ಸಚಿವಾಲಯ ಹೇಳಿದೆ.
ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗದ ಕೌಶಲ್ಯಭರಿತ ವ್ಯಕ್ತಿಗಳಿಗೆ ಅನುಕೂಲವಾಗುವ ಉದ್ದೇಶದಿಂದ, ಸಾರಿಗೆ ವಾಹನವನ್ನು ಓಡಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆಯ ಅಗತ್ಯತೆಯನ್ನು ತೆಗೆದುಹಾಕಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಸದ್ಯದ ನಿರ್ಧಾರದಿಂದ ಸಾಕಷ್ಟು ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ. ಜೊತೆಯಲ್ಲಿ ಪ್ರಸ್ತುತ ಸರಕು ಮತ್ತು ಸಾರಿಗೆ ಕ್ಷೇತ್ರದಲ್ಲಿ ಅಗತ್ಯವಿರುವ ಸುಮಾರು 22 ಲಕ್ಷ ಚಾಲಕರ ಕೊರತೆಯೂ ಕೇಂದ್ರದ ಹೊಸ ನಿರ್ಧಾರದಿಂದ ನೀಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.