ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನಲ್ಲಿ (ಬಿಪಿಸಿಎಲ್) ಕೇಂದ್ರ ಸರ್ಕಾರ ಹೊಂದಿರುವ ಶೇ 52.98ರಷ್ಟು ಷೇರು ಮಾರಾಟ ಮುಂದೂಡುವುದಿಲ್ಲ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ.
ಬಿಪಿಸಿಎಲ್ನಲ್ಲಿ ಶೇ 52.98ರಷ್ಟು ಷೇರು ಖರೀದಿಗೆ ಆಸಕ್ತಿ ವ್ಯಕ್ತಪಡಿಸುವ (ಇಒಐ) ಗಡುವು ಹತ್ತಿರವಾಗುತ್ತಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಹೊಂದಿರುವ ಕಂಪನಿಗಳು, ಭಾರತ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಲ್ಲಿ ಹೆಚ್ಚಿನ ಪಾಲು ತೆಗೆದುಕೊಳ್ಳಲು ಆಸಕ್ತಿ ತೋರಿಸುತ್ತಿವೆ. ಇಒಐ ಸಲ್ಲಿಸುವ ಗಡುವು ಜುಲೈ 31ಕ್ಕೆ ಕೊನೆಗೊಳ್ಳುತ್ತದೆ.
ಬಿಪಿಸಿಎಲ್ ಹೂಡಿಕೆಗೆ ಹಲವು ದೊಡ್ಡ ಜಾಗತಿಕ ತೈಲ ಮತ್ತು ಅನಿಲ ಕಂಪನಿಗಳು ಹಾಗೂ ಕೆಲವು ಭಾರತೀಯ ಸಂಸ್ಥೆಗಳಿಂದ ಆಸಕ್ತಿ ಬಂದಿದೆ. ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾದ ಅಡೆತಡೆಗಳ ಹೊರತಾಗಿಯೂ ಹೂಡಿಕೆದಾರರು ಪಿಎಸ್ಯುಗಳ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ
ಮೂಲಗಳ ಪ್ರಕಾರ ಸೌದಿ ಅರಾಮ್ಕೊ, ಅಬುಧಾಬಿ ನ್ಯಾಷನಲ್ ಆಯಿಲ್ ಕೋ (ಅಡ್ನೋಕ್), ರಷ್ಯಾದ ರೋಸ್‌ನೆಫ್ಟ್ ಮತ್ತು ಎಕ್ಸಾನ್ ಮೊಬಿಲ್ ಪಿಎಸ್‌ಯುಗಾಗಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉದ್ದೇಶಿಸಿವೆ. ಆಯಿಲ್-ಟು-ಟೆಲಿಕಾಂ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ ಬಿಡ್ಡಿಂಗ್ ಆಸಕ್ತಿ ತಳಿದಿದೆ ಎಂದು ತಿಳಿದುಬಂದಿದೆ.
ಇಒಐ ಸಲ್ಲಿಸುವ ಗಡುವನ್ನು ಎರಡು ಬಾರಿ ಮುಂದೂಡಲಾಗಿತ್ತು. ಪ್ರಸ್ತುತ ಗಡುವು ಜುಲೈ 31ಕ್ಕೆ ಕೊನೆಗೊಳ್ಳುತ್ತದೆ. ಹಲವು ಆಸಕ್ತ ಬಿಡ್ದಾರರು ಕಣಕ್ಕೆ ಇಳಿಯುವುದರೊಂದಿಗೆ ಇಒಐ ಸಮಯದೊಳಗೆ ಮುಕ್ತಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.