ನವದೆಹಲಿ:ದೇಶದಲ್ಲಿ ಎಲ್ಲ ರೀತಿಯ ಸಣ್ಣ ವ್ಯಾಪಾರ - ವಹಿವಾಟು ಅಭಿವೃದ್ಧಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಲು 'ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ'ಯನ್ನು ರಚಿಸುವ ಪ್ರಸ್ತಾಪವಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಗುರುವಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ಚಿಲ್ಲರೆ ವ್ಯಾಪಾರ ನೀತಿ ಕುರಿತು ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಸೋಮ್ ಪ್ರಕಾಶ್, ಚಿಲ್ಲರೆ ವ್ಯಾಪಾರಕ್ಕೆ ಇರುವ ನಿಯಮಗಳು ಮತ್ತು ನಿಬಂಧನೆಗಳನ್ನು ಮತ್ತಷ್ಟು ಸರಳಗೊಳಿಸುವ ಮೂಲಕ ವಹಿವಾಟು ಸ್ನೇಹಿ ವಾತಾವರಣ ಸೃಷ್ಟಿಸಲು ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ರಚನೆ ಪ್ರಸ್ತಾಪವಿದೆ. ಈ ಬಗ್ಗೆ ಮಧ್ಯವರ್ತಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೈದರಾಬಾದ್ - ಬೆಂಗಳೂರು ಮಧ್ಯೆ ಕೈಗಾರಿಕಾ ಕಾರಿಡಾರ್
ರಾಜ್ಯಸಭೆಯಲ್ಲಿ ಕೇಳಲಾದ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ಸೋಮ್ ಪ್ರಕಾಶ್, ಆಂಧ್ರಪ್ರದೇಶ ಸರ್ಕಾರದ ಮನವಿಯ ಮೇರೆಗೆ ಕೇಂದ್ರದ ಕೈಗಾರಿಕಾ ಕಾರಿಡಾರ್ ಕಾರ್ಯಕ್ರಮದಡಿ ಬೆಂಗಳೂರು ಮತ್ತು ಹೈದರಾಬಾದ್ ಮಧ್ಯೆ ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: 2025 -26ರ ವೇಳೆಗೆ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಗುರಿ: ನೀತಿ ಆಯೋಗದ ಸಿಇಒ ಅಧ್ಯಕ್ಷತೆಯಲ್ಲಿ ಸಭೆ
ಆಂಧ್ರಪ್ರದೇಶ ಸರ್ಕಾರದ ಬಹುದಿನಗಳ ಬೇಡಿಕೆಯಾದ ಬೆಂಗಳೂರು ಮತ್ತು ಹೈದರಾಬಾದ್ ಮಧ್ಯೆ ಕೈಗಾರಿಕಾ ಕಾರಿಡಾರ್ ಯೋಜನೆಗೆ ಸರ್ಕಾರ ಅನುಮತಿಸಿದೆ. ಕಾರಿಡಾರ್ ನಿರ್ಮಾಣಕ್ಕಾಗಿ ನೀಲನಕ್ಷೆ ಸಿದ್ಧಪಡಿಸಲು ಸೂಚಿಸಲಾಗಿದೆ. ಎರಡು ರಾಜ್ಯಗಳ ಮಧ್ಯೆ ಕೈಗಾರಿಕಾ ಕಾರಿಡಾರ್ ಶೀಘ್ರವೇ ತಲೆ ಎತ್ತಲಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಿದರು.