ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020-21ನೇ ಸಾಲಿನ ಕೇಂದ್ರ ಬಜೆಟ್‌ನ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಯ 'ಹಲ್ವಾ ಕಾರ್ಯಕ್ರಮ'ಕ್ಕೆ ಇಂದು ಚಾಲನೆ ನೀಡಿದ್ರು.
ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಸಲಿದ್ದಾರೆ. ಬಜೆಟ್ ದಾಖಲಾತಿಗಳ ಮುದ್ರಣದ ಆರಂಭವನ್ನು ಸಾಂಕೇತಿಕವಾಗಿ ಬಿಂಬಿಸುವ 'ಹಲ್ವಾ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೆರೆದಿದ್ದ ಹಣಕಾಸು ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಲ್ವಾ ಹಂಚಿದರು.
ಈ ವೇಳೆ, ಹಣಕಾಸು ಖಾತೆಯ ಸಹಾಯಕ ಸಚಿವ ಅನುರಾಗ್ ಠಾಕೂರ್, ಸಿಬಿಡಿಟಿ, ಸಿಬಿಐಸಿ ಸೇರಿದಂತೆ ಇಲಾಖೆಗಳ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರತಿ ವರ್ಷ ಸಾಂಪ್ರದಾಯಿಕವಾಗಿ ದೊಡ್ಡ ಕಡಾಯಿಯೊಂದರಲ್ಲಿ ಸಿಹಿ ಹಲ್ವಾ ತಯಾರಿಸಿ ಹಣಕಾಸು ಸಚಿವಾಲಯದ ಸಿಬ್ಬಂದಿಗೆ ವಿತರಿಸಿಕೊಂಡು ಬರಲಾಗುತ್ತಿದೆ.
'ಹಲ್ವಾ' ವಿತರಿಸಿ ಬಜೆಟ್ ಮುದ್ರಣಕ್ಕೆ ಚಾಲನೆ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿಹಿ ವಿತರಣೆಯ ಬಳಿಕ ಬಜೆಟ್ ಪ್ರಕ್ರಿಯೆಯಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಹಾಗೂ ಸಹಕರಿಸುವ ಸಿಬ್ಬಂದಿ ಲೋಕಸಭೆಯಲ್ಲಿ ಬಜೆಟ್ ಮಂಡನೆಯಾಗುವ ತನಕ ಹಣಕಾಸು ಸಚಿವಾಲಯದಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ. ಕುಟುಂಬದ ಜತೆಗಿನ ಸಂಪರ್ಕವನ್ನು ಕಡಿದುಕೊಳ್ಳಬೇಕಾಗುತ್ತದೆ. ಬಜೆಟ್‌ನ ಗೌಪ್ಯತೆಯನ್ನು ರಕ್ಷಿಸಲು ಈ ನಿಯಮಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ.