ನವದೆಹಲಿ: ಹಿಂದಿನ ಸರ್ಕಾರವು ಕಂಪನಿಗಳಿಗೆ ನೀಡಿದ್ದ ತೈಲ ಬಾಂಡ್‌ಗಳ ವೆಚ್ಚವನ್ನು ಭರಿಸದಿದ್ದರೆ ಸರ್ಕಾರವು ಹೆಚ್ಚಾಗುತ್ತಿರುವ ತೈಲ ಬೆಲೆಗಳಿಂದ ಜನರಿಗೆ ಸುಲಭವಾಗಿ ಪರಿಹಾರವನ್ನು ನೀಡಬಹುದಿತ್ತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್ (ಯುಪಿಎ) ಸರ್ಕಾರವು ತೈಲ ಬಾಂಡ್‌ಗಳು ಅಥವಾ ತೈಲ ಮಾರುಕಟ್ಟೆ ಕಂಪನಿಗಳಿಗೆ ನಗದು ಸಬ್ಸಿಡಿ ಬದಲಿಗೆ ಉಪಕರಣಗಳನ್ನು ನೀಡಿತ್ತು. ಈ ಸಬ್ಸಿಡಿ ಬಾಂಡ್‌ಗಳ ವೆಚ್ಚವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಇದನ್ನೂ ಓದಿ: ಐಟಿ ಪೋರ್ಟಲ್‌ನ ತಾಂತ್ರಿಕ ಸಮಸ್ಯೆಗಳನ್ನ ಶೀಘ್ರದಲ್ಲೇ ಬಗೆಹರಿಸುತ್ತೇವೆ: ಸಚಿವೆ ನಿರ್ಮಲಾ ಸೀತಾರಾಮನ್
ಒಂದು ವೇಳೆ 1. 4 ಲಕ್ಷ ಕೋಟಿಗೂ ಅಧಿಕ ಮೌಲ್ಯದ ತೈಲ ಬಾಂಡ್‌ಗಳನ್ನು ಯುಪಿಎ ಪಡೆಯದಿದ್ದರೆ, ಪೆಟ್ರೋಲಿಯಂ ಬೆಲೆ ಏರಿಕೆಗೆ ಬ್ರೇಕ್ ಹಾಕಲು ಈಗಿರುವ ಸರ್ಕಾರಕ್ಕೆ ಸಾಧ್ಯವಾಗುತ್ತಿತ್ತು ಎಂದು ಸೀತಾರಾಮನ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಈಗ ಏಕೆ ಕಡಿತಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ವಿವರಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಕಳೆದ ಏಳು ವರ್ಷಗಳಲ್ಲಿ ಬಡ್ಡಿ ಪಾವತಿಗೆ ಮಾತ್ರ 70,000 ಕೋಟಿಗೂ ಹೆಚ್ಚು ಖರ್ಚು ಮಾಡಿದೆ ಎಂದು ಜೂನ್ ನಲ್ಲಿ ಮೂಲಗಳು ತಿಳಿಸಿದ್ದವು. ಜೊತೆಗೆ ಸಾಂಕ್ರಾಮಿಕ ಕೋವಿಡ್ -19 ಎದುರಿಸಲು ಈ ವರ್ಷದ ಬಜೆಟ್‌ನಲ್ಲಿ 35 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯಗಳು ಕುಳಿತು ತೈಲ ಬೆಲೆ ಏರಿಕೆ ಬಗ್ಗೆ ಪರಿಹಾರಕ್ಕಾಗಿ ಮುಂದಿನ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಸೀತಾರಾಮನ್ ಇದೇ ವೇಳೆ ಸಲಹೆ ನೀಡಿದ್ದಾರೆ.