ಮುಂಬೈ: ಕೊರೊನಾ ವೈರಸ್ ಸೃಷ್ಟಿದ ಅವಾಂತರದಿಂದಾಗಿ ಭಾರತದ ಪ್ರಮುಖ ವಾಯುಯಾನ ಸಂಸ್ಥೆ 'ಗೋಏರ್' ಸರ್ಕಾರದಿಂದ ಆರ್ಥಿಕ ನೆರವು ಕೋರಿದೆ.
ವಾಡಿಯಾ ಸಮೂಹದ ಅಧ್ಯಕ್ಷ ನುಸ್ಲಿ ವಾಡಿಯಾ ಮತ್ತು ಗೋಏರ್ ವ್ಯವಸ್ಥಾಪಕ ನಿರ್ದೇಶಕ ಜೆಹ್ ವಾಡಿಯಾ ಅವರು ತಮ್ಮ ಉದ್ಯೋಗಿಗಳೊಂದಿಗೆ ನಡೆಸಿದ ಸಂವಹನದಲ್ಲಿ, ಕೊರೊನಾ ನಿಯಂತ್ರಣಕ್ಕೆ ಬಂದು ಲಾಕ್‌ಡೌನ್ ನಿರ್ಬಂಧ ತೆಗೆದು ಹಾಕಿದ ಬಳಿಕ ವಿಮಾನಗಳನ್ನು ಪುನರಾರಂಭಿಸಲು ಸಂಸ್ಥೆ ಗಮನಹರಿಸಿದೆ ಎಂದು ತಿಳಿಸಿದ್ದಾರೆ.
ಜಗತ್ತಿನಾದ್ಯಂತ, ವಿಮಾನಯಾನ ಸಂಸ್ಥೆಗಳು ಕೊರೊನಾ ವೈರಸ್ ಸೃಷ್ಟಿಸಿರುವ ಈ ಮಹಾ ಬಿಕ್ಕಟ್ಟನ್ನು ಎದುರಿಸಲು ಸರ್ಕಾರಗಳಿಂದ ಸಾಕಷ್ಟು ಹಣಕಾಸಿನ ನೆರವು ಪಡೆಯುತ್ತಿವೆ. ಇದರಲ್ಲೂ ಮುಖ್ಯವಾಗಿ ಸಂಸ್ಥೆಯ ನೌಕರರ ಅಗತ್ಯತೆಗಳನ್ನು ಪೂರೈಸಲು ಅವರಿಗೆ ಅನುವು ಮಾಡಿಕೊಡುತ್ತಿದೆ. ಈಗಾಗಲೇ ಸಂಸ್ಥೆಯ ಕೆಲವು ಉದ್ಯೋಗಿಗಳಿಗೆ ಸಂಬಳವನ್ನು ಮುಂದೂಡಿದೆ. ಇನ್ನೊಂದೆಡೆ ಕಂಪನಿಯ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ಮತ್ತು ಮರುಪ್ರಾರಂಭಿಸಲು ಪ್ರಯತ್ನಿಸುತ್ತಿದೆ ಎಂದು ಗೋಏರ್ ತಿಳಿಸಿದೆ.
ನಮಗೆ ಇದೊಂದೇ ಆಯ್ಕೆ ಇರುವುದರಿಂದ, ನಮ್ಮ ಸರ್ಕಾರದೊಂದಿಗೆ ಇದೇ ಬೇಡಿಕೆಯನ್ನು ಮುಂದುವರಿಸುತ್ತೇವೆ. ಇದರಿಂದಾಗಿ ನಾವು ಮುಖ್ಯವಾಗಿ ನಮ್ಮ ನೌಕರರ ಸ್ಥಾನವನ್ನು ಸುಧಾರಿಸಬಹುದು ಮತ್ತು ನಮ್ಮ ವಿಮಾನಯಾನ ಸಂಸ್ಥೆಯ ಸುಸ್ಥಿರತೆಯನ್ನೂ ಸಹ ಕಾಪಾಡಬಹುದು ಎಂದು ಅದು ಹೇಳಿದೆ.