ಬೆಂಗಳೂರು:ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಸ್ವಾತಂತ್ರ್ಯದ ನಂತರದ ಕನಿಷ್ಠ ಮಟ್ಟ ತಲುಪಬಹುದು ಎಂಬ ಆತಂಕವನ್ನು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ವ್ಯಕ್ತಪಡಿಸಿದರು.
ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಇಂಡಿಯಾ ಡಿಜಿಟಲ್ ಸಂವಾದದ 16ನೇ ಆವೃತ್ತಿ 'ಲೀಡಿಂಗ್ ಇಂಡಿಯಾದ ಡಿಜಿಟಲ್ ಕ್ರಾಂತಿ' ಕುರಿತು ಮಾತನಾಡಿದ ಅವರು, ಆರ್ಥಿಕತೆಯನ್ನು ಮತ್ತೆ ಹಳೆ ಹಾದಿಗೆ ತರಬೇಕಿದೆ. ಜನರು ಸೋಂಕಿನೊಂದಿಗೆ ಬದುಕಲು ಸಿದ್ಧರಾಗಿರಬೇಕು ಎಂದು ಹೇಳಿದರು.
ದೇಶದ ಆರ್ಥಿಕತೆಯ ಪ್ರತಿಯೊಂದು ವಲಯದ ಪ್ರತಿಯೊಬ್ಬ ಉದ್ಯಮಿ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವಂತಹ ಹೊಸ ವ್ಯವಸ್ಥೆ ಅಭಿವೃದ್ಧಿಪಡಿಸಲು ಮುಂದಾಗಬೇಕಿದೆ ಎಂದರು.
ಭಾರತದ ಜಿಡಿಪಿ ಕನಿಷ್ಠ ಐದು ಪ್ರತಿಶತದಷ್ಟು ಕುಗ್ಗುವ ನಿರೀಕ್ಷೆಯಿದೆ. 1947ರಿಂದೀಚೆಗೆ ನಾವು ಸ್ವಾತಂತ್ರ್ಯದ ನಂತರ ಅತ್ಯಂತ ಕಡಿಮೆ ಜಿಡಿಪಿ ಬೆಳವಣಿಗೆಯನ್ನು ತಲುಪಬಹುದು ಎಂಬ ಭಯವಿದೆ ಎಂದು ಮೂರ್ತಿ ಹೇಳಿದರು.
ಜಾಗತಿಕ ಜಿಡಿಪಿ ಕುಸಿಯಿತು. ಜಾಗತಿಕ ವ್ಯಾಪಾರ ಕುಗ್ಗಿದ್ದು, ಬಹುತೇಕ ಜಾಗತಿಕ ಪ್ರಯಾಣ ಕಣ್ಮರೆಯಾಗಿದೆ. ಜಾಗತಿಕ ಜಿಡಿಪಿ ಶೇ 5 ರಿಂದ ಶೇ 10ರವರೆಗೆ ಕುಗ್ಗುವ ಸಾಧ್ಯತೆಯಿದೆ ಎಂದರು.
ಮೂರ್ತಿ ಅವರು ಮಾರ್ಚ್ 24ರಂದು ಲಾಕ್‌ಡೌನ್‌ನ ಹೇರಿದ ಮೊದಲ ದಿನದಿಂದಲೇ ಜನರು ವೈರಸ್‌ನೊಂದಿಗೆ ಬದುಕಲು ಸಿದ್ಧರಾಗಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿಕೊಂಡು ಬರುತ್ತಿದ್ದಾರೆ.
ಆರಂಭಿಕ ಲಸಿಕೆಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಬಂದಿದ್ದು, ಇದು 6ರಿಂದ 9 ತಿಂಗಳವರೆಗೆ ದೇಶದಲ್ಲಿ ಲಭ್ಯವಾಗಬಹುದು. ಆದರೆ ನಾವು ದಿನಕ್ಕೆ 10 ಮಿಲಿಯನ್ ಜನರಿಗೆ ಲಸಿಕೆ ನೀಡಲು ಸಮರ್ಥರಾಗಿದ್ದರೂ ಎಲ್ಲಾ ಭಾರತೀಯರಿಗೆ ಲಸಿಕೆ ಹಾಕಲು 140 ದಿನಗಳು ಬೇಕಾಗುತ್ತವೆ. ಇದು ರೋಗ ಹರಡುವುದನ್ನು ತಡೆಯಲು ಬಹಳ ಸಮಯವಾಗಲಿದೆ ಎಂದು ಮೂರ್ತಿ ಹೇಳಿದರು.
ನಾವು ಆರ್ಥಿಕತೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ 140 ದಶಲಕ್ಷ ಕಾರ್ಮಿಕರು ಈ ವೈರಸ್‌ನ ಪ್ರಭಾವಕ್ಕೆ ಒಳಗಾಗಿದ್ದಾರೆ. ಭಾರತವು ಸಾಂಪ್ರದಾಯಿಕವಾಗಿ ಸಾರ್ವಜನಿಕ ಆರೋಗ್ಯದಲ್ಲಿ ಸಾಕಷ್ಟು ಹೂಡಿಕೆ ಮಾಡಿಲ್ಲ. ಪ್ರತಿಭೆ ಮತ್ತು ಬಲವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ನಮ್ಮಲ್ಲಿ ತೀವ್ರ ಕೊರತೆಯಿದೆ ಎಂದರು.