ಮುಂಬೈ:ಇಲ್ಲಿಯವರೆಗೆ ಮುಕೇಶ್ ಅಂಬಾನಿಗಿದ್ದ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಪಟ್ಟ ಜಾರಿದ್ದು, ಅದು ಗೌತಮ್ ಅದಾನಿ ಬಳಿ ಸೇರಿದೆ. ಕಳೆದ ವರ್ಷದಲ್ಲಿ ಅದಾನಿ ಸಂಪತ್ತು 55 ಬಿಲಿಯನ್ ಡಾಲರ್ ಏರಿಕೆ ಕಂಡಿದೆ. ಅಂದರೆ ದಿನಕ್ಕೆ ಸಾವಿರ ಕೋಟಿ ರೂಪಾಯಿಯಂತೆ 4.12 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ.
ಇದೇ ಸಮಯದಲ್ಲಿ ಮುಕೇಶ್ ಅಂಬಾನಿ ಸಂಪತ್ತು 14.3 ಬಿಲಿಯನ್ ಡಾಲರ್ ಅಂದರೆ 1.07 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ. ಈ ಮೂಲಕ ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಸಂಪತ್ತು ಗಳಿಸಿದ ಕೀರ್ತಿಗೆ ಗೌತಮ್ ಅದಾನಿ ಪಾತ್ರರಾಗಿದ್ದಾರೆ. ಒಂದು ವರ್ಷದಲ್ಲಿ ಹೆಚ್ಚು ಸಂಪತ್ತು ಗಳಿಸಿದ ಮಾತ್ರಕ್ಕೆ ಅವರು ಶ್ರೀಮಂತರಾಗುವುದಿಲ್ಲವಾದರೂ, ಇತ್ತೀಚಿನ ಬೆಳವಣಿಗೆಯೊಂದು ಮುಕೇಶ್ ಅಂಬಾನಿಯನ್ನು ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಪಟ್ಟದಿಂದ ಇಳಿಸಿದೆ.
ಕರಗಿದ ಅಂಬಾನಿ ಸಂಪತ್ತು
ಬ್ಲೂಮ್ಬರ್ಗ್ ಮಾಹಿತಿ ಪ್ರಕಾರ ಇದಕ್ಕೂ ಮುನ್ನ ಮುಕೇಶ್ ಅಂಬಾನಿ ಸಂಪತ್ತು 9100 ಕೋಟಿ ಡಾಲರ್ ಇದ್ದು(91 billion Doller), ಏಷ್ಯಾದ ಶ್ರೀಮಂತರಲ್ಲಿ ಮೊದಲ ಸ್ಥಾನದಲ್ಲಿದ್ದರು. ಇದೇ ವೇಳೆ ಗೌತಮ್ ಅದಾನಿಯ ಸಂಪತ್ತು 8880 ಕೋಟಿ ಡಾಲರ್ಗಳಿತ್ತು(88 billion Doller) . ಅಂದರೆ ಏಷ್ಯಾದ ಶ್ರೀಮಂತರಲ್ಲಿ ಅದಾನಿ ಎರಡನೇ ಸ್ಥಾನದಲ್ಲಿದ್ದರು. ಬುಧವಾರ ರಿಲಯನ್ಸ್ ಇಂಡಸ್ಟ್ರೀಸ್(ಆರ್‌ಐಎಲ್) ಷೇರುಗಳ ಬೆಲೆ ಇಳಿದ ಕಾರಣಕ್ಕೆ ಮುಕೇಶ್ ಅಂಬಾನಿಯ ಸಂಪತ್ತೂ ಕರಗಿದೆ.