ನವದೆಹಲಿ: ಭಾರತದ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಸುಧಾರಣಾ ಕ್ರಮವಾಗಿರುವ ಸರಕು ಮತ್ತು ಸೇವಾ ತೆರಿಗೆ(GST) ಶುರುವಾಗಿ ನಾಲ್ಕು ವರ್ಷಗಳು ಪೂರೈಕೆಗೊಂಡಿವೆ. 2017ರ ಜುಲೈ 1ರಿಂದ ಆರಂಭಗೊಂಡಿದ್ದ ಜಿಎಸ್ಟಿ ಗ್ರಾಹಕರಿಗೆ ಅನೇಕ ರೀತಿಯಲ್ಲಿ ಸಹಕಾರಿಯಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಹೇಳಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಕೂಡ ಮಾಡಿದೆ.
ಜಿಎಸ್ಟಿ ಜಾರಿಗೊಂಡ ಬಳಿಕ ದೇಶದಲ್ಲಿ ಅನೇಕ ವಸ್ತುಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು, ಪ್ರಮುಖವಾಗಿ ಹೇರ್ ಆಯಿಲ್, ಟೂತ್ಪೆಸ್ಟ್, ವಾಟರ್ ಹೀಟರ್ ಸೇರಿದಂತೆ ಅನೇಕ ವಸ್ತುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಿಕೊಂಡಿದೆ.
ಯಾವೆಲ್ಲ ವಸ್ತುಗಳಲ್ಲಿ ಇಳಿಕೆ
ಜನಸಾಮಾನ್ಯರು ಬಳಕೆ ಮಾಡುವ ಹೇರ್ ಆಯಿಲ್, ಟೂತ್ಪೆಸ್ಟ್, ಸಾಬೂನ್ಗಳ ಬೆಲೆಯಲ್ಲಿ ಶೇ 29.3ರಿಂದ ಶೇ 18ಕ್ಕೆ ಇಳಿಕೆಯಾಗಿದೆ. ಫ್ರಿಡ್ಜ್, ವಾಷಿಂಗ್ ಮಶಿನ್, ವ್ಯಾಕ್ಯೂಮ್ ಕ್ಲೀನರ್, ಗ್ರೈಂಡರ್ಸ್, ಮಿಕ್ಸರ್ಗಳು, ಹೇರ್ ಕ್ಲಿಪ್ಪರ್, ವಾಟರ್ ಹೀಟರ್, ಹೇರ್ ಡ್ರೈಯರ್, ಎಲೆಕ್ಟ್ರಿಕ್ ಐರನ್ ಬಾಕ್ಸ್, ಟಿವಿಗಳ ಮೇಲೆ ಶೇ. 31.3ರಿಂದ ಜಿಎಸ್ಟಿ 18ಕ್ಕೆ ಇಳಿಕೆಯಾಗಿದ್ದು, ಇದಕ್ಕೆ ಮುಖ್ಯ ಕಾರಣವಾಗಿದ್ದು ಜಿಎಸ್ಟಿ ಎಂದು ಹಣಕಾಸು ಇಲಾಖೆ ಹೇಳಿಕೊಂಡಿದೆ.