ನವದೆಹಲಿ:ಸೆಪ್ಟೆಂಬರ್ ವೇಳೆಗೆ 70 ಕೋಟಿ ನಾಗರಿಕರು ಒಳಗೊಂಡು ವ್ಯಾಕ್ಸಿನೇಷನ್ ಡ್ರೈವ್ ಚುರುಕುಗೊಳಿಸುವಂತೆ ಹಣಕಾಸು ಸಚಿವಾಲಯದ ವರದಿಯು ಕರೆ ನೀಡಿದ್ದು, ಆರ್ಥಿಕ ಬೆಳವಣಿಗೆ ಸಾಧ್ಯವಾದಷ್ಟು ವೇಗ ಪಡೆಯಲು ಇದು ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿದೆ. ಜನಸಂಖ್ಯೆಯ 80 ಪ್ರತಿಶತದಷ್ಟು ಜನ ರೋಗನಿರೋಧಕ ಪ್ರತಿರಕ್ಷೆ ಸಾಧಿಸಲಿದ್ದಾರೆ. ಆರ್ಥಿಕ ಚೇತರಿಕೆಯ ಆವೇಗ ಮರಳಿ ಪಡೆಯುವ ಪ್ರಮುಖ ಅಂಶವೆಂದರೆ ಸಾಧ್ಯವಾದಷ್ಟು ಬೇಗ ಲಸಿಕೆಯ ಪ್ರತಿರಕ್ಷೆ ಸಾಧಿಸುವುದು ಎಂದು ಹಣಕಾಸು ಸಚಿವಾಲಯದ ಇತ್ತೀಚಿನ ಮಾಸಿಕ ಆರ್ಥಿಕ ವರದಿ ತಿಳಿಸಿದೆ.
ಕೋವಿಡ್‌ನ ಎರಡನೇ ಅಲೆಯು ಚೇತರಿಕೆಯ ಆವೇಗದ ಮೇಲೆ ಪರಿಣಾಮ ಬೀರಿದೆ. ಉತ್ಪಾದನೆ ಮತ್ತು ನಿರ್ಮಾಣವು ಪ್ರಸಕ್ತ ತ್ರೈಮಾಸಿಕದಲ್ಲಿ ಮೃದುವಾದ ಆರ್ಥಿಕ ಆಘಾತವನ್ನು ಕಾಣುವ ನಿರೀಕ್ಷೆಯಿದೆ. ಆದರೆ, ಕಳೆದ ವರ್ಷದ ಪೂರೈಕೆ ಮತ್ತು ಬೇಡಿಕೆಯ ಆಘಾತಗಳಿಂದ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿರುವುದರಿಂದ ತೊಂದರೆಯುಂಟಾಗಿದೆ ಎಂದು ವರದಿ ಒಪ್ಪಿಕೊಂಡಿದೆ.
ಹೆಚ್ಚಿನ ಅಂತಾರಾಷ್ಟ್ರೀಯ ಸರಕು ದರಗಳು ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳು ಉತ್ಪಾದನೆ ಮತ್ತು ಸೇವೆಗಳಿಗೆ ಒಳಹರಿವಿನ ವೆಚ್ಚ ಹೆಚ್ಚಿಸಬಹುದು ಎಂದು ಎಚ್ಚರಿಸಿದೆ. ಆದರೂ ಸಾಮಾನ್ಯ ಮಾನ್ಸೂನ್ ಆಹಾರದ ಮೇಲಿನ ಹಣದುಬ್ಬರ ಒತ್ತಡ ಮೃದುಗೊಳಿಸುತ್ತದೆ ಎಂಬ ನಿರೀಕ್ಷೆಯಿದೆ.