ನವದೆಹಲಿ: ದೇಶದ ಆರ್ಥಿಕತೆಯ ವಾತಾವರಣ ದಿನದಿಂದ ದಿನಕ್ಕೆ ಹೆಚ್ಚು- ಹೆಚ್ಚು ಜಟಿಲವಾಗುತ್ತಿದ್ದಂತೆ ವಿತ್ತೀಯ ನೀತಿ ಪ್ರತಿಪಾದಕರು, ವಿಮರ್ಶಕರು ತಮ್ಮದೆಯಾದ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ.
ಕೇಂದ್ರೀಯ ಬ್ಯಾಂಕಿನ ವೀಕ್ಷಕರು ನಿಘಂಟುಗಳ ಮತ್ತು ಗೂಗಲ್ ಹುಡುಕಾಟದಲ್ಲಿ ಮುಳುಗಿದ್ದಾರೆ. ಕಾರಣ, ಗವರ್ನರ್ ಶಕ್ತಿಕಾಂತ ದಾಸ್ ಅವರು ತಮ್ಮ ಭಾಷಣದಲ್ಲಿ ಮತ್ತು ಇತ್ತೀಚಿನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಬಳಸಿದ 30 ಪದಗಳ ಫ್ಲೋಸಿನಾಸಿನಿನಿಹಿಲಿಪಿಲಿಫಿಕೇಷನ್ (Floccinaucinihilipilification) ಚರ್ಚೆಗೆ ಗ್ರಾಸವಾಗಿದೆ.
ಬುಧವಾರ ಎಂಪಿಸಿ ಸಭೆಯ ಬಳಿಕ ಮಾತನಾಡಿದ ಸದಸ್ಯ ಚೇತನ್ ಘೇಟ್ ಅವರು, ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜು ದುರದೃಷ್ಟವಶಾತ್ 'ಫ್ಲೋಸಿನಾಸಿನಿನಿಹಿಲಿಪಿಲಿಫಿಕೇಷನ್'ಗೆ ಒಳಪಟ್ಟಿದೆ. ಇದರ ಹೊರತಾಗಿಯೂ ಬೆಳವಣಿಗೆ ವೃದ್ಧಿಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಫ್ಲೋಸಿನಾಸಿನಿನಿಹಿಲಿಪಿಲಿಫಿಕೇಷನ್ ಅಂದರೆ ಯಾವುದೇ ವಸ್ತುವನ್ನಾದರೂ ನಿಷ್ಪಯೋಜಕ ಎಂದು ಅಂದಾಜಿಸುವ ಹವ್ಯಾಸವಾಗಿದೆ. 18 ನೇ ಶತಮಾನದಲ್ಲಿ ಈ ಪದ ಲ್ಯಾಟಿನ್ ನಿಂದ ಬಳಕೆಗೆ ಬಂದಿದ್ದು, ಅತಿ ಕಡಿಮೆ ಜನರು ಇದನ್ನು ಬಳಕೆ ಮಾಡುತ್ತಾರೆ ಎನ್ನಲಾಗಿದೆ.
ಸೋಮವಾರ ಆರ್ಥಿಕತೆಯ ಕುರಿತಾದ ಭಾಷಣದಲ್ಲಿ ಶಕ್ತಿಕಾಂತ್ ದಾಸ್ ಅವರು ಈ ಪದವನ್ನು ಉಲ್ಲೇಖಿಸಿದರು.