ನವದೆಹಲಿ: ಜಿಎಸ್‌ಟಿ ನಷ್ಟ ಪರಿಹಾರದ ಕೊರತೆ ನೀಗಿಸಲು ಹಣಕಾಸು ಸಚಿವಾಲಯವು 11ನೇ ಸುತ್ತಿನ ಕಂತಿನಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 6,000 ಕೋಟಿ ರೂ. ಬಿಡುಗಡೆ ಮಾಡಿದೆ.
ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ಹಣದಲ್ಲಿ 23 ರಾಜ್ಯಗಳಿಗೆ 5,516.60 ಕೋಟಿ ರೂ. ಹಾಗೂ 483.40 ಕೋಟಿ ರೂ. ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ (ದೆಹಲಿ, ಜಮ್ಮು & ಕಾಶ್ಮೀರ ಮತ್ತು ಪುದುಚೇರಿ) ಬಿಡುಗಡೆ ಮಾಡಲಾಗಿದೆ ಎಂದು ಜಿಎಸ್‌ಟಿ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ಭತ್ತ ಖರೀದಿಗೆ ರಾಯಚೂರು ರೈತರ ಜತೆ ರಿಲಯನ್ಸ್ ಒಪ್ಪಂದ: ಕನಿಷ್ಠ ಬೆಲೆಗಿಂತ 82 ರೂ. ಅಧಿಕ ದರ
ಉಳಿದ ಐದು ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಜಿಎಸ್‌ಟಿ ಅನುಷ್ಠಾನದಿಂದ ಆದಾಯದಲ್ಲಿ ಅಂತರ ಇಲ್ಲ ಎಂದು ಹೇಳಿದೆ.
ಈ ವಾರ ಈ ಮೊತ್ತವನ್ನು ಶೇ 5.10ರಷ್ಟು ಬಡ್ಡಿದರದಲ್ಲಿ ಎರವಲು ಪಡೆಯಲಾಗಿದೆ. ಇಲ್ಲಿಯವರೆಗೆ ವಿಶೇಷ ಸಾಲ ಪಡೆಯುವ ವಿಂಡೋ ಮೂಲಕ ಕೇಂದ್ರ ಸರ್ಕಾರವು 66,000 ಕೋಟಿ ರೂ. ಸಾಲವನ್ನು ಶೇ 4.72ರಷ್ಟು ಬಡ್ಡಿದರದಲ್ಲಿ ಎರವಲು ಪಡೆದಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಹತ್ತು ಹಂತಗಳಲ್ಲಿ ಸಾಲ ಮಾಡಿದ ಕೇಂದ್ರ ಸರ್ಕಾರವು ಅಕ್ಟೋಬರ್ 23, ನವೆಂಬರ್ 2, ನವೆಂಬರ್ 9, ನವೆಂಬರ್ 23, ಡಿಸೆಂಬರ್ 1, ಡಿಸೆಂಬರ್ 7, ಡಿಸೆಂಬರ್ 14, ಡಿಸೆಂಬರ್ 21, ಡಿಸೆಂಬರ್ 28, ಜನವರಿ 1 ಮತ್ತು 11ರಂದು ರಾಜ್ಯಗಳಿಗೆ ಹಣ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯಗಳಿಗೆ ₹ 60,066.36 ಕೋಟಿ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ 5,933.64 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.