ನವದೆಹಲಿ :ದೇಶದಲ್ಲಿನ ಕೋವಿಡ್ ವಿರುದ್ಧದ ಹೋರಾಟದಲ್ಲಿ ನೆರವಾಗಿರುವ ವೈದ್ಯಕೀಯ ಉತ್ಪನ್ನಗಳು, ಸೇವೆಗಳಿಗೆ ಜಿಎಸ್‌ಟಿಯಿಂದ ನೀಡಲಾಗಿದ್ದ ರಿಯಾಯ್ತಿಯನ್ನು ಪರಿಷ್ಕರಿಸಲಾಗಿದೆ. ಈ ರಿಯಾಯಿತಿ 2021ರ ಸೆಪ್ಟೆಂಬರ್ 30ರವರೆಗೆ ಅನ್ವಯಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಈ ಸಂಬಂಧ ಅಧಿಸೂಚನೆ ಹೊರಡಿಸಿರುವ ಸಚಿವಾಲಯ, ಕೋವಿಡ್‌ನಿಂದ ಮೃತಪಟ್ಟವರನ್ನು ಸುಡುವ ವಿದ್ಯುತ್ ಚಿತಾಗಾರಗಳಲ್ಲಿನ ಕೆಲಸಗಳ ಗುತ್ತಿಗೆ, ದುರಸ್ತಿ ಅಥವಾ ನಿರ್ವಹಣೆಗೆ ಬಳಸುವ ವಸ್ತುಗಳು ಹಾಗೂ ಇತರೆ ಪರಿಕರಗಳಿಗೆ ಶೇ.5ರಷ್ಟು ತೆರಿಗೆ ಅನ್ವಯಿಸಲಿದೆ ಎಂದು ಹೇಳಿದೆ. ಈ ಎಲ್ಲಾ ಸೇವೆಗಳಿಗೆ ಈ ಮೊದಲು ಶೇ.12ರಷ್ಟು ತೆರಿಗೆ ವಿಧಿಸಲಾಗಿತ್ತು.
ಇದನ್ನೂ ಓದಿ: ಪಿಎಫ್ಐಗೆ ಐಟಿ ಶಾಕ್: ಆದಾಯ ತೆರಿಗೆ ವಿನಾಯಿತಿಗೆ ಬ್ರೇಕ್
ಜೂನ್ 12ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕೋವಿಡ್ ಔಷಧಿ ರೆಮ್‌ಡಿಸಿವಿರ್, ಟೋಸಿಲಿಜುಮಾಬ್, ಮೆಡಿಕಲ್ ಆಕ್ಸಿಜನ್, ಆಕ್ಸಿಜನ್ ಕಾನ್‌ಸೆಂಟ್ರೇಟರ್ಸ್ ಹಾಗೂ ಇತರೆ ಅಗತ್ಯ ಕೋವಿಡ್ ಸಂಬಂಧಿತ ವಸ್ತುಗಳಿಗೆ ತೆರಿಗೆಯಿಂದ ರಿಯಾಯ್ತಿ ನೀಡಲಾಗಿತ್ತು.
ಹಣಕಾಸು ಸಚಿವಾಲಯದ ಕಂದಾಯ ವಿಭಾಗ ಜೂನ್ 14ರಂದು ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಕೋವಿಡ್‌ಗೆ ಸಂಬಂಧಿಸಿದ ವಸ್ತುಗಳಾದ ಸ್ಯಾನಿಟೈಸರ್, ಪಲ್ಸ್ ಆಕ್ಸಿಮೀಟರ್, ಬಿಪ್ಯಾಪ್ ಮೆಷಿನ್, ಟೆಸ್ಟಿಂಗ್ ಕಿಟ್, ಆ್ಯಂಬುಲೆನ್ಸ್ ಮತ್ತು ಉಷ್ಟಾಂಶ ತಪಾಸಣೆಯ ಉತ್ಪನ್ನಗಳಿಗೆ ಕಡಿಮೆ ದರವನ್ನು ನಿಗದಿ ಮಾಡಲಾಗಿದೆ. ಈ ರಿಯಾಯಿತಿ ದರ ಮುಂದಿನ ಸೆಪ್ಟೆಂಬರ್ 30ರವರೆಗೆ ಅನ್ವಯಿಸಲಿದೆ.