ನವದೆಹಲಿ: ಎಲ್ಲೆಡೆ ವ್ಯಾಪಕ ಚರ್ಚೆಗೆ ವೇದಿಕೆ ಸೃಷ್ಟಿಸಿರುವ ಕ್ರಿಪ್ಟೋಕರೆನ್ಸಿ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇದೇ ವಿಚಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ (RBI Governor) ಶಕ್ತಿಕಾಂತ್‌ದಾಸ್ ಮಾತನಾಡಿದ್ದು, ಕ್ರಿಪ್ಟೋಕರೆನ್ಸಿ ಆಳವಾದ ಸಮಸ್ಯೆ ಹೊಂದಿದೆ. ಇದರಿಂದ ದೇಶದ ಆರ್ಥಿಕ ಸ್ಥಿರತೆಗೆ ಧಕ್ಕೆ ಆಗುತ್ತದೆ ಎಂದು ಹೇಳಿದ್ದಾರೆ.
ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆ ಮಾಡಲು ಹಾಗೂ ಖಾತೆ ತೆರೆಯಲು ಸಾಲ ನೀಡಲಾಗುತ್ತದೆ ಎಂಬ ಮಾಹಿತಿ ಇದೆ ಎಂದಿರುವ ಅವರು, ದೇಶದ ಆರ್ಥಿಕ ಸ್ಥಿರತೆಗೆ ಧಕ್ಕೆ ತರಬಲ್ಲ ಸಂಗತಿಗಳು ಅದರೊಂದಿಗೆ ಬೆಸೆದುಕೊಂಡಿವೆ ಎಂದಿದ್ದಾರೆ. ಕ್ರಿಪ್ಟೋಕರೆನ್ಸಿ ಬಗ್ಗೆ ಇನ್ನಷ್ಟು ಆಳವಾದ ಚರ್ಚೆ ನಡೆಯಬೇಕು. ಈ ಕರೆನ್ಸಿ ಮೇಲೆ ಹೂಡಿಕೆ ಮಾಡಿದರೆ ದೊಡ್ಡ ಪ್ರಮಾಣದ ಲಾಭ ಸಿಗಲಿದೆ ಎಂದು ಜನರನ್ನು ತಪ್ಪು ದಾರಿಗೆ ತರುವಂತಹ ಕೆಲಸ ನಡೆಯುತ್ತಿವೆ ಎಂದು ಎಚ್ಚರಿಸಿದ್ದಾರೆ.