ನವದೆಹಲಿ :ಭಾರತ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಫೇಸ್‌ಬುಕ್ ಇದೀಗ ಗಡುವು ಮುಕ್ತಾಯಕ್ಕೂ ಮುನ್ನ ಸರ್ಕಾರದ ಹೊಸ ಡಿಜಿಟಲ್ ನಿಯಮಗಳನ್ನು ಪಾಲಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದೆ.
ಡಿಜಿಟಲ್ ಕಂಟೆಂಟ್ಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ನಿಯಮಗಳನ್ನು ಟ್ವಿಟರ್, ಫೇಸ್‌ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳು ಇನ್ನೂ ಅನುಸರಿಸಿರಲಿಲ್ಲ.
ಹೀಗಾಗಿ, ಸರ್ಕಾರದ ನೀತಿ ಸಂಹಿತೆ ಪಾಲಿಸದಿದ್ದರೆ ಸೋಷಿಯಲ್ ಮೀಡಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಮೇ 25 (ಇಂದಿನವರೆಗೆ) ವರೆಗೆ ಗಡುವು ನೀಡಿತ್ತು.
ಇಂದು ಗಡುವು ಅಂತ್ಯಗೊಳ್ಳಲಿರುವ ಕಾರಣ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಫೇಸ್‌ಬುಕ್, "ನಾವು ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳ ನಿಬಂಧನೆಗಳನ್ನು ಪಾಲಿಸುವ ಗುರಿ ಹೊಂದಿದ್ದೇವೆ ಮತ್ತು ಸರ್ಕಾರದೊಂದಿಗೆ ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಚರ್ಚಿಸುವುದನ್ನು ಮುಂದುವರಿಸುತ್ತೇವೆ" ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.
"ಐಟಿ ನಿಯಮಗಳಿಗೆ ಅನುಸಾರವಾಗಿ, ನಾವು ಕಾರ್ಯಾಚರಣೆಯ ಪ್ರಕ್ರಿಯೆಗಳನ್ನು ಕಾರ್ಯಗತಗೊಳಿಸಲು ಮತ್ತು ದಕ್ಷತೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದೇವೆ. ನಮ್ಮ ವೇದಿಕೆಯಲ್ಲಿ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ತಮ್ಮನ್ನು ತಾವು ವ್ಯಕ್ತಪಡಿಸುವ ಜನರ ಸಾಮರ್ಥ್ಯಕ್ಕೆ ಫೇಸ್‌ಬುಕ್ ಎಂದಿಗೂ ಬದ್ಧವಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಕಂಟೆಂಟ್ಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಹೊಸ ನಿಯಮಗಳನ್ನು ಘೋಷಿಸಿತ್ತು. ಆದರೆ, ಯಾರೂ ಇದನ್ನು ಪಾಲಿಸದ ಕಾರಣ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಕಂಪನಿಗಳು ನಿಯಮಗಳನ್ನು ಅನುಸರಿಸಲು ವಿಫಲವಾದರೆ, ಅವುಗಳ ಮೇಲೆ ನಿರ್ಬಂಧ ಹೇರುವುದಾಗಿ ಅಥವಾ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು.