ನವದಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಸುಮಾರು 90 ನಿಮಿಷಗಳ ಕಾಲ ಆಯವ್ಯಯ ಪ್ರತಿಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಕೇಂದ್ರದಿಂದ ಮಂಡನೆಯಾಗಿರುವ ಬಜೆಟ್ಗೆ ಪ್ರತಿಪಕ್ಷಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿವೆ.
ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮಾಧ್ಯಮಗೋಷ್ಟಿ ನಡೆಸಿ, ಹಣಕಾಸು ಸಚಿವೆ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಮಂಡನೆ ಮಾಡಿರುವ ಬಜೆಟ್ ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬಂಡವಾಳಶಾಹಿ ಪರವಾದ ಬಜೆಟ್ ಆಗಿದೆ ಎಂದರು. ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಕೇವಲ ಎರಡು ಸಲ 'ಬಡವರು'(poor) ಎಂಬ ಪದದ ಉಲ್ಲೇಖವಾಗಿದೆ. ಈ ಮೂಲಕ ದೇಶದಲ್ಲಿ ಬಡವರು ಇದ್ದಾರೆ ಎಂಬುದನ್ನ ನೆನಪಿಸಿಕೊಂಡಿರುವ ಅವರಿಗೆ ಧನ್ಯವಾದ ಹೇಳಬೇಕು ಎಂದು ವ್ಯಂಗ್ಯವಾಡಿದರು. ಬಡವರು ಈ ಬಜೆಟ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಎಂದರು.