ನವದೆಹಲಿ: ಬೈನ್ ಕ್ಯಾಪಿಟಲ್ ಬೆಂಬಲಿತ ಎಮ್‌ಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯು ಆರಂಭಿಕ ಷೇರು ಮಾರಾಟದ ಮೂಲಕ ಹಣ ಸಂಗ್ರಹಿಸಲು ಅನುಮತಿ ಕೋರಿ ಸೆಬಿ(Sebi)ಗೆ ಪ್ರಾಥಮಿಕ ಪತ್ರಗಳನ್ನು ಸಲ್ಲಿಸಿದೆ.
ಇದರಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) 1,100 ಕೋಟಿ ರೂ. ಮೌಲ್ಯದ ಈಕ್ವಿಟಿ ಷೇರುಗಳ ವಿತರಣೆ ಒಳಗೊಂಡಿದೆ. ಡ್ರಾಫ್ಟ್ ರೆಡ್ ಹೇರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ) ಪ್ರಕಾರ 18,168,356 ಷೇರುಗಳನ್ನು ಪ್ರವರ್ತಕರು ಮತ್ತು ಅಸ್ತಿತ್ವದಲ್ಲಿರುವ ಷೇರುದಾರರಿಂದ ಮಾರಾಟ ಮಾಡುವ ಪ್ರಸ್ತಾಪವಿದೆ.
OFS (Offer for sale) ನ ಭಾಗವಾಗಿ, ಪ್ರವರ್ತಕರಾದ ಸತೀಶ್ ಮೆಹ್ತಾ 20.30 ಲಕ್ಷ, ಸುನಿಲ್ ಮೆಹ್ತಾ 2.5 ಲಕ್ಷ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಪ್ರಸ್ತುತ, ಸತೀಶ್ ಮೆಹ್ತಾ ಮತ್ತು ಸುನೀಲ್ ಮೆಹ್ತಾ ಕಂಪನಿಯಲ್ಲಿ ಕ್ರಮವಾಗಿ ಶೇ .41.92 ಮತ್ತು ಶೇ. 6.13 ರಷ್ಟು ಪಾಲು ಹೊಂದಿದ್ದರೆ, ಬಿ.ಸಿ. ಹೂಡಿಕೆಗಳು ಶೇ. 13.09 ರಷ್ಟು ಪಾಲನ್ನು ಹೊಂದಿವೆ. ಕಂಪನಿಯು 200 ಕೋಟಿ ರೂ.ವರೆಗಿನ ಮೊತ್ತದ ಐಪಿಒ ಪೂರ್ವ ನಿಯೋಜನೆ ಪರಿಗಣಿಸುತ್ತಿದೆ.
ಒಂದು ವೇಳೆ, ಸೆಬಿ ಈ ಯೋಜನೆಗೆ ಅನುಮತಿ ಕೊಟ್ಟರೆ, ಈ ಆದಾಯವನ್ನು ಸಾಲದ ಪಾವತಿಗೆ, ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಎಮ್‌ಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯು ಔಷಧಗಳ ಉತ್ಪನ್ನ, ಮಾರಾಟದಲ್ಲಿ ತೊಡಗಿದ್ದು, ಜಾಗತಿಕವಾಗಿ 70 ಮಾರುಕಟ್ಟೆಗಳನ್ನು ಹೊಂದಿದೆ. ಪುಣೆ ಮೂಲದ ಕಂಪನಿಯು ಪ್ರಸ್ತುತ ತನ್ನ ಅಂಗಸಂಸ್ಥೆಯಾದ ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ ಮೂಲಕ ಕೋವಿಡ್ಗಾಗಿ ಆರ್‌ಎನ್‌ಎ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಇದನ್ನೂ ಓದಿ: ಮುಂದಿನ 5 ವರ್ಷಗಳಲ್ಲಿ ಭಾರತ ಆಟೋಮೊಬೈಲ್ ಉತ್ಪಾದನಾ ಹಬ್ ಆಗಲಿದೆ: ಗಡ್ಕರಿ