ನವದೆಹಲಿ: ಲಡಾಖ್‌ನಲ್ಲಿ ಚೀನಾ ನಡೆಸುತ್ತಿರುವ ಉದ್ಧಟತನಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಚೀನಿ ವಸ್ತುಗಳ ನಿಷೇಧ ಅಭಿಯಾನ ವೇಗ ಪಡೆದುಕೊಳ್ಳುತ್ತಿದೆ. ಕೆಲವು ಸಂಘಟನೆಗಳು ಚೀನಿ ಸರಕುಗಳನ್ನು ನಿಷೇಧಿಸಿ ಇಲ್ಲವೇ ಸುಂಕ ಏರಿಕೆ ಮಾಡಿ ಎಂಬ ಬೇಡಿಕೆಯ ನಡುವೆ ಬಿಎಸ್‌ಎನ್‌ಎಲ್‌ನ ಟೆಂಡರ್ ವಾಪಸ್ ಪಡೆದ ನಂತರ ರೈಲ್ವೆ ಕೂಡ ಎಂಜಿನಿಯರಿಂಗ್ ಟೆಂಡರ್ವೊಂದನ್ನು ರದ್ದುಪಡಿಸಿದೆ.
ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಮಿಲಿಟರಿ ನಡುವೆ ಹಿಂಸಾತ್ಮಕ ಘರ್ಷಣೆಯು ಕಳೆದ ಕೆಲವು ವಾರಗಳಿಂದ ನಡೆಯುತ್ತಿದೆ. ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಗಾಲ್ವಾನ್ ಕಣಿವೆಯಲ್ಲಿ ಸೋಮವಾರ 20 ಭಾರತೀಯ ಸೈನಿಕರನ್ನು ಹುತಾತ್ಮರನ್ನಾಗಿಸಿದೆ.
ಭಾರತ-ಚೀನಾ ಗಡಿ ವಿವಾದದ ಮಧ್ಯೆ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಡಿಎಫ್‌ಸಿಸಿಐಎಲ್) 471 ಕೋಟಿ ರೂ. ಟೆಂಡರ್ ರದ್ದುಗೊಳಿಸಲು ನಿರ್ಧರಿಸಿದೆ. ಬೀಜಿಂಗ್ ನ್ಯಾಷನಲ್ ರೈಲ್ವೆ ರಿಸರ್ಚ್ ಆ್ಯಂಡ್ ಡಿಸೈನ್ ಇನ್‌ಸ್ಟಿಟ್ಯೂಟ್ ಆಫ್ ಸಿಗ್ನಲ್ ಮತ್ತು ಕಮ್ಯುನಿಕೇಷನ್ ಗ್ರೂಪ್ ಕಂಪನಿ ಲಿಮಿಟೆಡ್‌ನೊಂದಿಗಿನ ಕರಾರು ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ರೈಲ್ವೆ ಸಚಿವಾಲಯದ ಮೂಲಗಳ ಪ್ರಕಾರ, ಯೋಜನೆಯ ಉಸ್ತುವಾರಿನೋಡಿಕೊಳ್ಳುತ್ತಿರುವ ಡಿಎಫ್‌ಸಿಸಿಐಎಲ್ ಈ ಯೋಜನೆಯನ್ನು ಮುಕ್ತಾಯಗೊಳಿಸಿದೆ. ಈ ವಿಷಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಅವರು ರೈಲ್ವೆ ಮಂಡಳಿ ಮತ್ತು ವಿಶ್ವಬ್ಯಾಂಕ್‌ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಇಡಿಎಫ್‌ಸಿ) 417 ಕಿ.ಮೀ ಉದ್ದದ ಕಾನ್ಪುರ್-ದೀನ್ ದಯಾಳ್ ಉಪಾಧ್ಯಾಯ ವಿಭಾಗದಲ್ಲಿ ಸಿಗ್ನಲಿಂಗ್ ಮತ್ತು ದೂರಸಂಪರ್ಕ ಕಾರ್ಯಕ್ಕೆ 2016ರಲ್ಲಿ ಈ ಯೋಜನೆಯನ್ನು ಚೀನಾದ ಸಂಸ್ಥೆಗೆ ನೀಡಲಾಯಿತು ಎಂದು ಹೇಳಿದರು.