ನವದೆಹಲಿ: ಮಾರಾಟ ಮತ್ತು ಉತ್ಪಾದನೆಯ ಕಡಿತದಿಂದ ಈಗಾಗಲೇ ಕುಸಿತದ ಹಾದಿ ಹಿಡಿದ ವಾಹನೋದ್ಯಮ ಕ್ಷೇತ್ರದ ಬಳಿಕ ಜವಳಿ ಉದ್ಯಮದ ಬೆಳವಣಿಗೆ ಸಹ ಕುಂಠಿತಗೊಂಡಿದೆ.
2019ರ ಏಪ್ರಿಲ್- ಜುಲೈ ಅವಧಿಯಲ್ಲಿ ಜವಳಿಯ ರಫ್ತು ವಿಭಾಗವು ಶೇ 24.5ರಷ್ಟು ಕುಸಿತ ಕಂಡಿದ್ದು, ಆಗಸ್ಟ್ ತಿಂಗಳ ಮೊದಲ ಮೂರು ವಾರಗಳ ಪ್ರಗತಿಯ ವೃದ್ಧಿಯು ಶೇ 25ಕ್ಕೆ ತಲುಪಿದೆ. ತಿಂಗಳಿಂದ ತಿಂಗಳಿಗೆ ಕ್ಷೀಣಿಸುವಿಕೆ ಗೆರೆ ಇಳಿಮುಖವಾಗುತ್ತಾ ಸಾಗುತ್ತಿದೆ.
ಜವಳಿ ವಲಯದ ಉತ್ಪನ್ನವಾರು ದತ್ತಾಶಂಗಳ ವಿಶ್ಲೇಷಣೆಯ ಅನ್ವಯ, ಗಾರ್ಮೆಂಟ್ಸ್ ಮತ್ತು ಸಿದ್ಧ ಉಡುಪುಗಳ ರಫ್ತಿನಲ್ಲಿಯೂ ಇಳಿಕೆ ಕಂಡುಬಂದಿದೆ. ಕಾಟನ್ ಯಾರ್ನ್/ ಫ್ಯಾಬ್ರಿಕ್ಸ್ ರಫ್ತು ಸಹ ಕ್ಷೀಣಿಸಿದೆ. ಕಳೆದ ನಾಲ್ಕು ತಿಂಗಳಿಂದ ಸತತ ಕುಸಿತದ ಹಾದಿಯಲ್ಲಿರುವ ಕಾಟನ್ ಯಾರ್ನ್, ಶೇ 35ರಷ್ಟು ಕ್ಷೀಣಿಸಿದೆ. ಇದು ಉದ್ಯಮವನ್ನು ಆತಂಕಕ್ಕೆ ದೂಡಿದೆ. ತಿಂಗಳವಾರು ಕಾಟನ್ ಯಾರ್ನ್ ರಫ್ತಿನಲ್ಲಿ ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಅದು 59- 60 ಮಿಲಿಯನ್ ಕೆ.ಜಿ.ಗೆ ತಲುಪಿದೆ ಎಂದು ಕಾಟನ್ ಜವಳಿ ರಫ್ತು ಪ್ರಚಾರ ಮಂಡಳಿಯ ಅಧ್ಯಕ್ಷ ಡಾ. ಕೆ.ವಿ. ಶ್ರೀನಾಸನ್ ತಿಳಿಸಿದ್ದಾರೆ.
ಭಾರತೀಯ ಜವಳಿಗೆ ಚೀನಾದಲ್ಲಿ ಯಥೇಚ್ಛ ಬೇಡಿಕೆ ಇದೆ. ಆದರೆ, ಆ ರಾಷ್ಟ್ರ ಶೇ 50ರಷ್ಟು ಆಮದನ್ನು ಕಡಿತಗೊಳಿಸಿದೆ. ಇದರ ಜೊತೆಗೆ ಬಾಂಗ್ಲಾ ಶೇ 38ರಷ್ಟು ಹಾಗೂ ಕೊರಿಯಾ ಶೇ 45ರಷ್ಟು ಆಮದನ್ನು ಕಡಿಮೆ ಮಾಡಿದೆ ಎಂದು ಹೇಳಿದರು.