ಮುಂಬೈ:ಕೋವಿಡ್ -19 ವ್ಯಾಪಿಸಿರುವುದು ಆಧುನಿಕ ಇತಿಹಾಸದಲ್ಲಿ ಅತ್ಯಂತ ಹಾನಿಕಾರಕವಾಗಿದ್ದು, ಇದನ್ನು ಎದುರಿಸಲು ಜಾಗತಿಕ ಮಟ್ಟದಲ್ಲಿ ಸಹಕಾರ ಹಾಗೂ ಸಂಘಟನಾತ್ಮಕ ಪ್ರಯತ್ನ ಅಗತ್ಯವೆಂದು ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಖೇಶ್ ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಯೋ ಮೀಟ್ ಮೂಲಕ ''ದ ಕೊರೊನಾ ವೈರಸ್: ವಾಟ್ ಯು ನೀಡ್ ಟು ನೋ ಅಬೌಟ್ ದ ಗ್ಲೋಬಲ್ ಪ್ಯಾಂಡಮಿಕ್'' ಎಂಬ ಪುಸ್ತಕವನ್ನು ಆನ್ಲೈನ್ ಮೂಲಕ ಬಿಡುಗಡೆ ಮಾಡುವ ವೇಳೆ ಮಾತನಾಡಿದ ಅವರು, ಕೊರೊನಾ ವೈರಸ್ನ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು.
ಈ ಪುಸ್ತಕವನ್ನು ವೈದ್ಯಕೀಯ ತಜ್ಞರಾದ ಡಾ. ಸ್ವಪ್ನೈಲ್ ಪಾರೀಖ್, ಡಾ. ಮಹೆರಾ ದೇಸಾಯಿ ಹಾಗೂ ಡಾ. ರಾಜೇಶ್ ಎಂ ಪಾರೀಖ್ ಅವರು ರಚಿಸಿದ್ದು, ಎಬುರಿ ಪ್ರೆಸ್ ಪ್ರಕಾಶನದಲ್ಲಿ ಪ್ರಕಟಗೊಂಡಿದೆ.
ಕೊರೊನಾ ವೈರಸ್ ಅತ್ಯಂತ ಹಾನಿಕಾರಕ ಎಂಬುದರಲ್ಲಿ ಸಂದೇಹವೇ ಇಲ್ಲ. ಸಾರ್ವಜನಿಕ ಆರೋಗ್ಯದ ಜೊತೆಗೆ ಆರ್ಥಿಕ ಪರಿಸ್ಥಿತಿ ಸಾಕಷ್ಟು ಹದೆಗೆಡಲು ಕೂಡಾ ಇದು ಕಾರಣವಾಗಿದೆ. ಇದನ್ನು ಹೊಡೆದೋಡಿಸಲು ಬಲಿಷ್ಠ ಜಾಗತಿಕ ಸಹಕಾರ ಅತ್ಯಗತ್ಯ ಎಂದು ಮುಖೇಶ್ ಅಂಬಾನಿ ಪ್ರತಿಪಾದಿಸಿದ್ದಾರೆ.
ಎಲ್ಲಾ ರಾಷ್ಟ್ರಗಳು ಕೊರೊನಾದಿಂದ ಸಾಕಷ್ಟು ನಷ್ಟ ಅನುಭವಿಸುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳೂ ಕೂಡಾ ಕಾಡುತ್ತಿವೆ. ಈ ಅನುಮಾನಗಳಿಗೆ ಉತ್ತರ ಕೊಡುವ ಪ್ರಯತ್ನವನ್ನು ಈ ಪುಸ್ತಕ ಮಾಡುತ್ತದೆ ಎಂದು ಮುಖೇಶ್ ಅಂಬಾನಿ ಭರವಸೆ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ನೀತಾ ಅಂಬಾನಿ ಈ ಸಾಂಕ್ರಾಮಿಕ ಸೋಂಕಿನಿಂದ ಭಯ, ದುಃಖ, ಅನಿಶ್ಚಿತತೆಯ ವಾತಾವರಣ ಸೃಷ್ಟಿಯಾಗಿದೆ. ಇಂಥಹ ಕಾಲಘಟ್ಟದಲ್ಲಿ ಈ ಪುಸ್ತಕ ಪ್ರಸ್ತುತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.