ನವದೆಹಲಿ/ ಲಖ್ನೌ: ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಮಾರಣಾಂತಿಕ ಕೊರೊನಾ ವೈರಸ್ ಇಡೀ ಜಗತ್ತನ್ನು ಕಾಡುತ್ತಿದ್ದು, ಈಗ ಭಾರತಕ್ಕೂ ಪ್ರವೇಶಿಸಿದೆ. ಇದು ದೇಶಾದ್ಯಂತ ವ್ಯಾಪಾರ ಚಟುವಟಿಕೆಗಳಿಗೆ ಅಡ್ಡಿಪಡಿಸಲು ಆರಂಭಿಸಿದೆ.
ಆಗ್ರಾದಲ್ಲಿರುವ ಹೋಟೆಲ್ ಹಾಗೂ ಪ್ರವಾಸಿ ತಾಣಗಳಿಗೆ ಇಟಲಿ, ಇರಾನ್ ಮತ್ತು ಚೀನಾ ಆಗಮಿಸುವವರನ್ನು ತಪಾಸಣೆಗೆ ಒಳಪಡಿಸುವಂತೆ ಹಿರಿಯ ವೈದ್ಯಾಧಿಕಾರಿಗಳು ಆದೇಶಿಸಿದ್ದಾರೆ.
'ಕೋವಿಡ್-19 ಸೋಂಕು ತಗುಲಿರುವವರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದರೆ ಶೀಘ್ರವೇ ವೈದ್ಯಕೀಯ ತಂಡ ಭೇಟಿಕೊಟ್ಟು ಸೋಂಕಿತರನ್ನು ತಪಾಸಣೆಗೆ ಒಳಪಡಿಸಲಿದೆ' ಎಂದು ಆಗ್ರಾದ ಹಿರಿಯ ವೈದ್ಯಾಧಿಕಾರಿ ಡಾ. ಮುಖೇಶ್ ವತ್ಸ ಹೇಳಿದ್ದಾರೆ.
ಇಟಲಿ, ಇರಾನ್ ಅಥವಾ ಚೀನಾದಿಂದ ಯಾವುದೇ ವ್ಯಕ್ತಿ ಬರುತ್ತಿದ್ದರೆ ಅವರ ಬಗ್ಗೆ ನಮಗೆ ತಿಳಿಸಬೇಕು ಎಂದು ನಾವು ನಗರದ ಎಲ್ಲಾ ಹೋಟೆಲ್‌ಗಳಿಗೆ ಸೂಚನೆ ನೀಡಿದ್ದೇವೆ. ಹೋಟೆಲ್ನವರು ನಮಗೆ ತಿಳಿಸಿದ ತಕ್ಷಣ, ವೈದ್ಯರ ತಂಡ ಹೋಟೆಲ್‌ಗೆ ಹೋಗಿ ಕೊರೊನಾ ವೈರಸ್ ರೋಗಲಕ್ಷಣಗಳ ಬಗ್ಗೆ ಅವರನ್ನು ತಪಾಸಣೆ ನಡೆಸುತ್ತದೆ. ಕೋವಿಡ್ ವರದಿಯಾದ ದೇಶಗಳ ಸಂದರ್ಶಕರ ಬಗ್ಗೆ 24 ಗಂಟೆಗಳ ಕಾಲ ಚಾಲ್ತಿಯಲ್ಲಿರುವ ನಿಯಂತ್ರಣ ಕಚೇರಿಗೆ ತಿಳಿಸುವಂತೆ ಎಲ್ಲಾ ಪ್ರವಾಸಿ ತಾಣಗಳಿಗೆ ಆದೇಶಿಸಿದ್ದೇವೆ ಎಂದರು.
ಇಟಲಿ, ಇರಾನ್, ದಕ್ಷಿಣ ಕೊರಿಯಾ, ಜಪಾನ್ ನಾಗರಿಕರಿಗೆ ಮಾರ್ಚ್ 3ರಂದು ಅಥವಾ ಅದಕ್ಕೂ ಮೊದಲು ನೀಡಲಾದ ಎಲ್ಲಾ ನಿಯಮಿತ ವೀಸಾ / ಇ-ವೀಸಾಗಳನ್ನು ಭಾರತ ಸರ್ಕಾರ ಅಮಾನತುಗೊಳಿಸಿದೆ.
ಮೊಬೈಲ್ ಲಾಂಚ್ ಸ್ಥಗಿತಗೊಳಿಸಿದ ಶಿಯೋಮಿ:
ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಉತ್ಪನ್ನ ಬಿರುಗಡೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮನು ಕುಮಾರ್ ಜೈನ್ ತಿಳಿಸಿದ್ದಾರೆ.
ಭಾರತದ ಕೆಲ ಭಾಗಗಳಲ್ಲಿ ಕೋವಿಡ್-19 ಸೋಂಕು ಹಬ್ಬಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಹೀಗಾಗಿ ಮಾರ್ಚ್ನಲ್ಲಿ ನಡೆಯಬೇಕಿದ್ದ ಉತ್ಪನ್ನ ಬಿಡುಗಡೆ ಕಾರ್ಯಕ್ರಮವನ್ನು ನಡೆಸುತ್ತಿಲ್ಲ. ಇದು ನಮ್ಮ ಗ್ರಾಹಕ, ಮಾಧ್ಯಮ ಸ್ನೇಹಿತರ ಉದ್ಯೋಗಿಗಳ ಹಾಗೂ ಪಾಲುದಾರರು ಸುರಕ್ಷತೆಗಾಗಿ ಈ ಕ್ರಮ ತೆಗೆದುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲರೂ ಸುರಕ್ಷತೆಯಿಂದಿರಿ ಎಂದು ಆಶಿಸಿದರು.
ಆರೋಗ್ಯ ಸಚಿವಾಲಯದ ನಿಯಮ ಪಾಲಿಸುವಂತೆ ಜನತೆಗೆ ಆದೇಶ:
ಫೆಬ್ರವರಿ 25ರಂದು ಪ್ರಯಾಣ ಮಾಡಿದವರಲ್ಲಿ ಸೋಂಕು ಇರುವುದು ದೃಢಪಟ್ಟರೆ ಆರೋಗ್ಯ ಸಚಿವಾಲಯ ನಿಯಮ ಪಾಲಿಸುವಂತೆ ಏರ್ ಇಂಡಿಯಾ ಕೋರಿದೆ.
ಫೆಬ್ರವರಿ 25ರ ಎಐ 154 ವಿಯೆನ್ನಾ-ದೆಹಲಿಯಲ್ಲಿ ನಡುವೆ ಪ್ರಯಾಣಿಸಿದ ಪ್ರಯಾಣಿಕರ ಗಮನಕ್ಕೆ. 20 ಪ್ರಯಾಣಿಕರಲ್ಲಿ ಒಬ್ಬರಿಗೆ ಕೊರೊನಾ ವೈರಸ್ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ದಯವಿಟ್ಟು ಕೊರೊನಾ ವೈರಸ್ ಬಗ್ಗೆ ಆರೋಗ್ಯ ಸಚಿವಾಲಯ ಸೂಚಿಸಿರುವ ಪ್ರೋಟೋಕಾಲ್ ಅನ್ನು ಅನುಸರಿಸಿ ಎಂದು ಏರ್ ಇಂಡಿಯಾ ಟ್ವೀಟ್ ಮಾಡಿದೆ.
ನೋಯ್ಡಾದ 1000 ಕಂಪನಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ
ಕೊರೊನಾ ವೈರಸ್ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಗೌತಮ್ ಬುದ್ಧ ನಗರ ಜಿಲ್ಲಾ ಆಡಳಿತ, ಇಲ್ಲಿನ 1,000ಕ್ಕೂ ಅಧಿಕ ದೇಶಿ ಮತ್ತು ವಿದೇಶಿ ಕಂಪನಿಗಳಿಗೆ ಸೋಂಕಿನ ಬಗ್ಗೆ ಎಚ್ಚರಿಕೆಯ ನೋಟಿಸ್ ನೀಡಿದೆ.
ಗೌತಮ್ ಬುದ್ ನಗರದ ಮುಖ್ಯ ವೈದ್ಯಾಧಿಕಾರಿ ಅನುರಾಗ್ ಭಾರ್ಗವ ಮಾತನಾಡಿ, ತಮ್ಮ ಕಂಪೆನಿಗಳಲ್ಲಿ ಯಾರಾದರೂ ವಿದೇಶಕ್ಕೆ ಹೋಗಿದ್ದರೆ, ಅವರು ಭಾರತಕ್ಕೆ ಮರಳಿದ ನಂತರ ಆರೋಗ್ಯ ಇಲಾಖೆಗೆ ತಿಳಿಸಬೇಕು ಎಂದು ಎಲ್ಲಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದರು.