ಕೈರೋ (ಈಜಿಪ್ಟ್): ಸೂಯೆಜ್ ಕಾಲುವೆಯ ಮರಳಿನ ರಾಶಿಯಲ್ಲಿ ಸಿಲುಕಿಕೊಂಡು ಸರಕು ಹಡಗುಗಳ ಸಂಚಾರಕ್ಕೆ ತಡೆಯಾಗಿದ್ದ ಎವರ್ ಗಿವನ್ ಕಂಟೇನರ್ ಹಡಗು ನೀರಲ್ಲಿ ಮೇಲೆದ್ದು ಮತ್ತೆ ತೇಲಿದೆ ಎಂದು ಕಡಲ ಸೇವಾ ಪೂರೈಕೆದಾರ ಇಂಚೇಪ್ ಶಿಪ್ಪಿಂಗ್ ತಿಳಿಸಿದೆ.
400 ಮೀಟರ್ ಉದ್ದದ ಹಡಗು ವಿಶ್ವದ ಪ್ರಮುಖ ವ್ಯಾಪಾರ ಮಾರ್ಗವಾದ ಸೂಯೆಜ್ ಕೆನಾಲ್ನಲ್ಲಿ ಸಿಲುಕಿಕೊಂಡ ಬಳಿಕ, ಅದರ ತೆರವಿಗೆ ಸುಮಾರು ಒಂದು ವಾರ ತೆಗೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಹಡಗು ಆರು ದಿನಗಳಲ್ಲಿ ಮರಳಿನ ಹಿಡಿತದಿಂದ ಮುಕ್ತಗೊಂಡಿದೆ.
"ಎಂವಿ ಎವರ್ ಗಿವನ್ ಅನ್ನು 2021ರ ಮಾರ್ಚ್ 29ರಂದು 04:30ಕ್ಕೆ ಯಶಸ್ವಿಯಾಗಿ ಮರು ತೇಲಿಸಲಾಯಿತು. ಹಡಗು ಸುರಕ್ಷಿತವಾಗಿದೆ. ಮುಂದಿನ ಹಂತಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲಿದ್ದೇವೆ." ಎಂದು ಇಂಚೇಪ್ ಟ್ವೀಟ್ ಮಾಡಿದೆ.