ಬೀಜಿಂಗ್:ಹುವಾಯಿ ಟೆಕ್ನಾಲಜಿಸ್ ಕಂಪನಿಗೆ ಭಾರತ ತನ್ನ ದೇಶದಲ್ಲಿ ವ್ಯಾಪಾರ ನಡೆಸಲು ನಿರ್ಬಂಧ ಹೇರದಂತೆ ಚೀನಾ ಎಚ್ಚರಿಕೆ ನೀಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಒಂದು ವೇಳೆ ನಿರ್ಬಂಧಕ್ಕೆ ಭಾರತ ಮುಂದಾದರೇ ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲದ ಕಂಪನಿಗಳು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟ ಸಂದೇಶ ರವಾನಿಸಿದೆ ಎನ್ನಲಾಗುತ್ತಿದೆ.
'ಇನ್ನೂ ಕೆಲವೇ ತಿಂಗಳುಗಳಲ್ಲಿ ಮುಂದಿನ ಪೀಳಿಗೆಯ 5ಜಿ ನೆಟ್‌ವರ್ಕ್ ಆರಂಭಿಸಲು ಭಾರತ ಪ್ರಯೋಗಗಳನ್ನು ನಡೆಸಲಿದೆ. ಚೀನಾದ ಟೆಲಿಕಾಂ ಸಲಕರಣೆಗಳ ತಯಾರಕರನ್ನು ಆಹ್ವಾನಿಸುವ ಬಗ್ಗೆ ಇನ್ನೂ ಕರೆ ನೀಡಿಲ್ಲ' ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ಟೆಲಿಕಾಂ ಸಲಕರಣೆ ತಯಾರಿಕ ಕಂಪನಿ ಹುವಾಯಿ. ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಮರಕ್ಕೆ ಇದು ಸಿಲುಕಿಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು, ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಮೇ ತಿಂಗಳಲ್ಲಿ ಹುವಾಯಿ ಅನ್ನು ಕಪ್ಪುಪಟ್ಟಿಗೆ ಸೇರಿಸಿತು. ಜೊತೆಗೆ 'ಹುವಾಯಿ ಕಂಪನಿಯ ಉಪಕರಣಗಳನ್ನು ಚೀನಾ ತನ್ನ ಬೇಹುಗಾರಿಕೆಗೆ ಬಳಸಿಕೊಳ್ಳಬಹುದು. ಹೀಗಾಗಿ, ಈ ಕಂಪನಿಯ ಉಪಕರಣಗಳನ್ನು ಬಳಸದಂತೆ ತನ್ನ ಮಿತ್ರರಾಷ್ಟ್ರಗಳಿಗೆ ಎಚ್ಚರಿಕೆ ನೀಡಿತ್ತು'.
ವಾಷಿಂಗ್ಟನ್‌ನ ಒತ್ತಡಕ್ಕೆ ಮಣಿದು ಭಾರತ ಹುವಾಯಿ ಅನ್ನು ನಿರ್ಬಂಧಿಸಿದರೇ ಚೀನಾದಲ್ಲಿ ವ್ಯವಹರಿಸುತ್ತಿರುವ ಭಾರತೀಯ ಸಂಸ್ಥೆಗಳ ಮೇಲೆ "ಹಿಮ್ಮುಖ ನಿರ್ಬಂಧಗಳು" ವಿಧಿಸಬೇಕಾಗುತ್ತದೆ ಎಂದು ಚೀನಾದ ಅಧಿಕಾರಿಗಳು ಭಾರತೀಯ ರಾಯಭಾರಿಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.