ಬೀಜಿಂಗ್:ಗಾಲ್ವನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಕ್ರೂರ ದಾಳಿಯ ಬಳಿಕ ಚೀನಾ ಉತ್ಪನ್ನಗಳು ಹಾಗೂ ಹೂಡಿಕೆಗಳನ್ನು ಬಹಿಷ್ಕರಿಸುವಂತೆ ದೊಡ್ಡ ಮಟ್ಟದ ದೇಶಾದ್ಯಂತ ಕೇಳಿಬರುತ್ತಿರುವ ಬೆನ್ನಲ್ಲೇ ಚೀನಾ ರಕ್ಷಣಾತ್ಮಕ ಮಾತುಗಳನ್ನು ಆಡುತ್ತಿದೆ.
ದೆಹಲಿಯೊಂದಿಗಿನ ತನ್ನ ಸಂಬಂಧವನ್ನು ಚೀನಾ ಗೌರವಿಸುತ್ತದೆ. ಪರಿಸ್ಥಿತಿಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಮಾತುಕತೆ ನಡೆಸುತ್ತಿವೆ ಎಂದು ಚೀನಾ ಹೇಳಿಕೆ ನೀಡಿದೆ.
ಬಹಿಷ್ಕಾರದ ಕೂಗು ಹೆಚ್ಚುತ್ತಿರುವುದರಿಂದ ಚೀನಾ ಟೆಲಿಕಾಂ ಕಂಪೆನಿಗಳಾದ ಹುವಾಯಿ, ಶಿಯೋಮಿ ಮತ್ತು ಒಪ್ಪೊ ಸೇರಿದಂತೆ ಇತರೆ ಕಂಪನಿಗಳು ಅಸಮಾಧಾನ ಹೊರಹಾಕುತ್ತಿವೆ. ಚೀನಾದ ನಂತರ ವಿಶ್ವದ ಎರಡನೇ ಅತಿ ದೊಡ್ಡದಾಗಿದೆ ಮೊಬೈಲ್ ಫೋನ್ಗಳ ಮಾರುಕಟ್ಟೆಯಾದ ಭಾರತದಲ್ಲಿ ದೊಡ್ಡ ಹಿನ್ನಡೆ ಆಗುತ್ತಿದೆ.
ಚೀನಾವು ಭಾರತ ಜೊತೆಗಿನ ದ್ವಿಪಕ್ಷೀಯ ವ್ಯಾಪಾರದ ಅತಿದೊಡ್ಡ ಫಲಾನುಭವಿ ಆಗಿದ್ದು, 2019ರಲ್ಲಿ ಸುಮಾರು 92.68 ಯುಎಸ್ ಡಾಲರ್ ವಹಿವಾಟಿನಲ್ಲಿ ಸುಮಾರು 60 ಬಿಲಿಯನ್ ಡಾಲರ್ನಷ್ಟು ಪಾಲು ಪಡೆದಿದೆ.
ಚೀನಾದ ಉತ್ಪನ್ನ ಮತ್ತು ಹೂಡಿಕೆಗಳನ್ನು ಬಹಿಷ್ಕರಿಸುವಂತೆ ಭಾರತದಲ್ಲಿ ಹೆಚ್ಚುತ್ತಿರುವ ಕರೆಗಳ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಅವರನ್ನು ಕೇಳಿದಾಗ, 'ಬಿಕ್ಕಟ್ಟಿನ ಜವಾಬ್ದಾರಿ ಭಾರತದ ಮೇಲಿದೆ' ಎಂದಿದ್ದಾರೆ.
ಗಾಲ್ವನ್ ಕಣಿವೆಯ ಗಂಭೀರ ಪರಿಸ್ಥಿತಿಯ ಸಂಬಂಧ ಸರಿ ಮತ್ತು ತಪ್ಪು ಬಹಳ ಸ್ಪಷ್ಟವಾಗಿವೆ. ಜವಾಬ್ದಾರಿ ಸಂಪೂರ್ಣವಾಗಿ ಭಾರತೀಯರ ಮೇಲಿದೆ ಎಂಬುದನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ ಎಂದು ಹೇಳಿದರು.
ಬುಧವಾರ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರಾದ ವಾಂಗ್ ಯಿ ಮತ್ತು ಸಚಿವ ಎಸ್.ಜೈಶಂಕರ್ ಈ ಬಗ್ಗೆ ಮಾತನಾಡಿದ್ದಾರೆ. ಎರಡೂ ರಾಷ್ಟ್ರಗಳು "ಸಾಧ್ಯವಾದಷ್ಟು ಬೇಗ" ಗಡಿಯ ಉದ್ವಿಗ್ನತೆ ತಣ್ಣಗಾಗಿಸಲು ಒಪ್ಪಿಕೊಂಡಿವೆ.
ಇತ್ತೀಚಿನ ಗಡಿ ದಾಳಿಯ ನಂತರ ಚೀನಾ ಮತ್ತು ಭಾರತದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮವು ಭಾರತದಲ್ಲಿನ ಚೀನಾ ಕಂಪನಿಗಳಿಗೆ ಹರಡುತ್ತಿದೆ ಎಂದು ಸರ್ಕಾರಿ ಗ್ಲೋಬಲ್ ಟೈಮ್ಸ್ ಶುಕ್ರವಾರ ವರದಿ ಮಾಡಿದೆ.
ಚೀನಾದ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಒಪ್ಪೊ, ಭಾರತದಲ್ಲಿ ತನ್ನ ಮಹತ್ವಾಕಾಂಕ್ಷೆಯ 5 ಜಿ ಹ್ಯಾಂಡ್‌ಸೆಟ್‌ನ ಆನ್‌ಲೈನ್ ಬಿಡುಗಡೆಯನ್ನೇ ರದ್ದುಗೊಳಿಸಿದೆ. ಮಾರಣಾಂತಿಕ ಗಡಿ ಘಟನೆಯು ಯಾವುದೇ ರಾಷ್ಟ್ರಗಳು ನಿರೀಕ್ಷಿಸಿರಲಿಲ್ಲ. ಇದರ ಪರಿಣಾಮವಾಗಿ ಭಾರತದಲ್ಲಿ ರಾಷ್ಟ್ರೀಯವಾದದ ಜ್ವರವು ಹೆಚ್ಚಾಗುತ್ತಿದೆ. ಈಗಾಗಲೇ ದ್ವಿಪಕ್ಷೀಯ ಸಂಬಂಧ ಮತ್ತು ಆರ್ಥಿಕ ಸ್ನೇಹದ ಮೇಲೆ ಗಮನಾರ್ಹ ಒತ್ತಡ ಸೃಷ್ಟಿಯಾಗಿದೆ ಎಂದು ವರದಿ ತಿಳಿಸಿದೆ.
ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳ ಸ್ಥಿರತೆ ಕಾಪಾಡಲು ಸರ್ಕಾರಗಳು ಮತ್ತು ಜನರು ವೈಚಾರಿಕತೆ ಪ್ರದರ್ಶಿಸಲು ಕರೆ ನೀಡುವ ಸಮಯವಿದು. ಚೀನಾ-ಭಾರತ ಸಂಬಂಧದ ಪ್ರಸ್ತುತ ತೊಂದರೆಗಳು ಉಭಯ ದೇಶಗಳ ಆರ್ಥಿಕ ಸಂಬಂಧಗಳ ಸ್ಥಿತಿಸ್ಥಾಪಕತ್ವಕ್ಕೆ ಸತ್ವಪರೀಕ್ಷೆಯಾಗಿದೆ ಎಂದು ವರದಿ ವಿಶ್ಲೇಷಿಸಿದೆ.