ನವದೆಹಲಿ:ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರತದ ಕೋಳಿ ಮಾರಾಟವು ಶೇ 50ಕ್ಕಿಂತಲೂ ಕಡಿಮೆಯಾಗಿದ್ದು, ಬೆಲೆಯಲ್ಲೂ ಸಹ ಶೇ 70ರಷ್ಟು ಕಡಿಮೆಯಾಗಿದೆ. ಕೋಳಿ ತಿಂದರೆ ಕೊರೊನಾ ಬರುತ್ತದೆ ಎಂಬ ಊಹಾಪೋಹ ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿದೆ ಎಂದು ಗೋದ್ರೆಜ್ ಅಗ್ರೊವೆಟ್ ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.
ಅಗ್ರೊವೆಟ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಯಾದವ್ ಮಾತನಾಡಿ, ಒಂದು ತಿಂಗಳಲ್ಲಿ ಕೋಳಿ ಮಾರಾಟ ಶೇ 50ರಷ್ಟು ಹಾಗೂ ಬೆಲೆಯಲ್ಲಿ ಶೇ 70ರಷ್ಟು ತಗ್ಗಿದೆ. ಕೋಳಿ ಸೇವಿಸಿದರೆ ಕೊರೊನಾ ವೈರಸ್ ಬರುತ್ತದೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವುದೇ ಇದಕ್ಕೆ ಕಾರಣ. ಗೋದ್ರೆಜ್ ಟೈಸನ್ ಫುಡ್ ಸಹ ಕಳೆದ ಒಂದು ತಿಂಗಳಲ್ಲಿ 6,00,000 ಕೋಳಿಗಳ ಮಾರಾಟದಲ್ಲಿ ಶೇ 40ರಷ್ಟು ತೀವ್ರ ಕುಸಿದಿದೆ ಎಂದು ಹೇಳಿದರು.
ಒಮ್ಮೆ ಎದ್ದ ವದಂತಿಗಳು ತಿಳಿಯಾದರೆ ಮುಂದಿನ 2-3 ತಿಂಗಳಲ್ಲಿ ಬಳಕೆಯ ಪ್ರಮಾಣ ಹೆಚ್ಚಾಗಲಿದೆ. ದೇಶದಲ್ಲಿ ಕೋಳಿಯ ಕೊರತೆ ಉಂಟಾಗುತ್ತದೆ. ಬೆಲೆಗಳು ಸಹ ತೀವ್ರವಾಗಿ ಏರಿಕೆಯಾಗಲಿವೆ ಎಂದರು.
ಕೋಳಿ ತಿಂದರೆ ಕೊರೊನಾ ವೈರಸ್ ಹರಡುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದೆ. ಕೋಳಿಯಿಂದ ಸೋಂಕು ಹರಡುತ್ತೆ ಎಂದು ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.
ದೇಶಾದ್ಯಂತ ವಾರಕ್ಕೆ 75 ಲಕ್ಷ ಕೋಳಿ ಮಾರಾಟ ಆಗುತ್ತಿದ್ದವು. ಈಗ ಅದು 35 ದಶಲಕ್ಷಕ್ಕೆ ಇಳಿದಿದೆ. ಕಳೆದ ಒಂದು ತಿಂಗಳಲ್ಲಿ ಎಕ್ಸ್-ಫಾರ್ಮ್ ಗೇಟ್ನ ಪ್ರತಿ ಕೆ.ಜಿ. 100 ರೂ.ನಿಂದ 35 ರೂ.ಗೆ ಬೆಲೆ ಇಳಿದಿದ್ದು, ಶೇ 75 ರಷ್ಟು ಬೆಲೆ ಇಳಿಕೆಯಾಗಿದೆ. ಕೋಳಿಯಿಂದ ಕೊರೊನಾ ವೈರಸ್ ಹರಡುತ್ತದೆ ಎಂಬ ವದಂತಿ ವಾಟ್ಸ್ಆ್ಯಪ್ಗಳಲ್ಲಿ ಹಬ್ಬುತ್ತಿವೆ. ಇದು ಇಡೀ ಕೋಳಿ ಉದ್ಯಮ ಮತ್ತು ರೈತರ ಮೇಲೆ ಪರಿಣಾಮ ಬೀರಿದೆ. ಉತ್ಪಾದನೆಯು ಈಗ ಹೆಚ್ಚಾಗಿದ್ದು, ಅದನ್ನು ಕಡಿಮೆ ಬೆಲೆಗೆ ವಿಲೇವಾರಿ ಮಾಡಲಾಗುತ್ತಿದೆ ಎಂದು ಯಾದವ್ ಹೇಳಿದರು.