ನವದೆಹಲಿ:ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 2.38 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 2.62 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಮರುಪಾವತಿ ಮಾಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಆದಾಯ ತೆರಿಗೆ ಇಲಾಖೆ ಒಟ್ಟು 1.83 ಲಕ್ಷ ಕೋಟಿಗಿಂತ ಹೆಚ್ಚಿನ ತೆರಿಗೆ ಬಾಕಿ ಮರುಪಾವತಿ ಮಾಡಲಾಗಿದೆ. ತೆರಿಗೆ ಮರುಪಾವತಿಯ ಮೊತ್ತವು 2019-20ನೇ ಹಣಕಾಸು ವರ್ಷದಲ್ಲಿ ನೀಡಲಾದ ಮರುಪಾವತಿಗಿಂತ ಶೇ 43.2ರಷ್ಟಕ್ಕಿಂತ ಹೆಚ್ಚಾಗಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿದ ಕಾರಣ ಕಳೆದ ಹಣಕಾಸು ವರ್ಷವು ತುಂಬಾ ಸವಾಲಿನದ್ದಾಗಿದೆ. ತೆರಿಗೆ ಪಾವತಿದಾರರಿಗೆ ತಕ್ಷಣದ ಪರಿಹಾ ನೀಡಲು ಹೆಚ್ಚಿನ ಪ್ರಕರಣಗಳಲ್ಲಿ ತೆರಿಗೆ ಬಾಕಿ ಮರುಪಾವತಿ ತ್ವರಿತವಾಗಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ
ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಕಾರ್ಪೊರೇಟ್ ತೆರಿಗೆದಾರರಿಗೆ ಹೆಚ್ಚಿನ ಪ್ರಮಾಣದ ಮರುಪಾವತಿ ನೀಡಲಾಗಿದೆ. 3.46 ಲಕ್ಷಕ್ಕೂ ಹೆಚ್ಚು ಕಾರ್ಪೊರೇಟ್ ತೆರಿಗೆದಾರರು 1.74 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ತೆರಿಗೆ ಮರುಪಾವತಿ ಪಡೆದಿದ್ದು, ಇದು ಒಟ್ಟು ತೆರಿಗೆ ಮರುಪಾವತಿ ಮೊತ್ತದ ಮೂರನೇ ಎರಡರಷ್ಟು ಹೆಚ್ಚಿದೆ.
ಹಿಂದೂ ಅವಿಭಜಿತ ಕುಟುಂಬ (ಎಚ್‌ಯುಎಫ್), ಪಾಲುದಾರಿಕೆ ಮತ್ತು ಮಾಲೀಕತ್ವ ಸೇರಿದಂತೆ 2.34 ಕೋಟಿಗೂ ಅಧಿಕ ವೈಯಕ್ತಿಕ ತೆರಿಗೆದಾರರು 87,749 ಕೋಟಿ ರೂ.ಗಳ ತೆರಿಗೆ ಬಾಕಿ ಮರುಪಾವತಿ ಪಡೆದರು. ಇದು ಕಳೆದ ವರ್ಷ ನೀಡಲಾದ ಒಟ್ಟು ಮರುಪಾವತಿ ಮೊತ್ತದ ಮೂರನೇ ಒಂದು ಭಾಗಕ್ಕಿಂತಲೂ ಕಡಿಮೆಯಾಗಿದೆ.
ಸಾಂಕ್ರಾಮಿಕ ರೋಗದ ಆರ್ಥಿಕ ಕುಸಿತ ಸರಾಗಗೊಳಿಸುವ ವಿವಿಧ ಕ್ರಮಗಳನ್ನು ತರಲು ಇದು ಸರ್ಕಾರದ ಪ್ರಯತ್ನವಾಗಿದೆ. ಅದಕ್ಕೆ ಅನುಗುಣವಾಗಿ ಸಿಬಿಡಿಟಿ ಬಾಕಿ ಇರುವ ಮರುಪಾವತಿಯನ್ನು ತ್ವರಿತವಾಗಿ ನೀಡಿದೆ ಎಂದು ಸಚಿವಾಲಯ ತಿಳಿಸಿದೆ.