ಬೆಂಗಳೂರು:ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಸುಮಾರು 749.73 ಕೋಟಿ ರೂಪಾಯಿ ನಿವ್ವಳ ಲಾಭವಾಗಿದೆ ಎಂದು ಸರ್ಕಾರಿ ಒಡೆತನದ ಕೆನರಾ ಬ್ಯಾಂಕ್ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.
ಕೆನರಾ ಬ್ಯಾಂಕ್ನ 2020-21ರ ಮೂರನೇ ತ್ರೈಮಾಸಿಕದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 88.54ರಷ್ಟು ಲಾಭಾಂಶ ಕಂಡಿದ್ದು, ಅದರ ನಿವ್ವಳ ಲಾಭ 749.73 ಕೋಟಿ ರೂ.ಗೆ ಏರಿಕೆಯಾಗಿದೆ. ಹಿಂದಿನ ವರ್ಷ ಇದೇ ತ್ರೈಮಾಸಿಕದಲ್ಲಿ 397.65 ಕೋಟಿ ರೂ. ಲಾಭವಿತ್ತು.
ಕೆನರಾ ಬ್ಯಾಂಕ್ ಕಾರ್ಯಕಾರಿ ನಿರ್ದೇಶಕರು ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್ನ ಒಟ್ಟು ಆದಾಯ ಶೇ. 57.68ರಷ್ಟು ಹೆಚ್ಚಾಗಿದ್ದು, ಕಳೆದ ವರ್ಷ 15,531.80 ಕೋಟಿ ರೂ. ಇದ್ದ ಬ್ಯಾಂಕ್ ಆದಾಯ ಈಗ 24,490.63 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
ಇದನ್ನೂ ಓದಿ:ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಕೆಪಿಎಸ್ಸಿ ನೌಕರ, ಕಾನ್ಸ್ಟೇಬಲ್ ಅರೆಸ್ಟ್
ಖಜಾನೆ ಕಾರ್ಯಾಚರಣೆಗಳ ವಹಿವಾಟು ಕಳೆದ ವರ್ಷ 3,290.33 ಕೋಟಿ ರೂಪಾಯಿಗಳಿದ್ದು, ಈ ವರ್ಷ 6,309.09 ರೂಪಾಯಿಯಷ್ಟಿದೆ. ಚಿಲ್ಲರೆ ಬ್ಯಾಂಕಿಂಗ್ ಕಾರ್ಯಾಚರಣೆಗಳು 8,486.75 ಕೋಟಿ ರೂಪಾಯಿಯಿದ್ದು, ಹಿಂದಿನ ವರ್ಷ 5,468.90 ಕೋಟಿ ರೂಪಾಯಿಗಳಷ್ಟಿತ್ತು. ಸಗಟು ಬ್ಯಾಂಕಿಂಗ್ ಕಾರ್ಯಾಚರಣೆಗಳು ಕಳೆದ ವರ್ಷ 5,196.02 ರೂಪಾಯಿಗಳಷ್ಟಿದ್ದು, ಈ ಬಾರಿ 6,691.49 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
2020ರ ಏಪ್ರಿಲ್ 1ರಿಂದ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ವಿಲೀನವಾದ ಕಾರಣದಿಂದ ವಹಿವಾಟುಗಳಲ್ಲಿ ಏರಿಕೆ ಕಂಡಿದೆ ಎನ್ನಲಾಗಿದ್ದು, ಈ ಫಲಿತಾಂಶಗಳನ್ನು ಬಹಿರಂಗಪಡಿಸುವ ಸಲುವಾಗಿ ಖಾಸಗಿ ಹೋಟೆಲ್ನಲ್ಲಿ ಕೆನರಾ ಬ್ಯಾಂಕ್ನ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳು ಮಾಧ್ಯಮಗೋಷ್ಟಿ ನಡೆಸಿದ್ದರು.