ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ ಐಡಿಬಿಐ ಬ್ಯಾಂಕ್ ಲಿಮಿಟೆಡ್‌ನಲ್ಲಿ ನಿರ್ವಹಣಾ ನಿಯಂತ್ರಣ ವರ್ಗಾವಣೆ ಜತೆಗೆ ಕಾರ್ಯತಂತ್ರದ ಹೂಡಿಕೆ ಹಿಂತೆಗೆತಕ್ಕೆ ತಾತ್ವಿಕವಾಗಿ ಅನುಮೋದನೆ ನೀಡಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜತೆಗೆ ಸಮಾಲೋಚಿಸಿ ವಹಿವಾಟನ್ನು ರಚಿಸುವ ಸಮಯದಲ್ಲಿ ಸರ್ಕಾರ ಮತ್ತು ಎಲ್‌ಐಸಿಯಿಂದ ಆಯಾ ಷೇರುದಾರರ ವ್ಯಾಪ್ತಿಯನ್ನು ನಿರ್ಧರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರ ಮತ್ತು ಎಲ್‌ಐಸಿ ಒಟ್ಟಾಗಿ ಐಡಿಬಿಐ ಬ್ಯಾಂಕಿನ ಶೇ 94ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಿವೆ (ಕ್ರಮವಾಗಿ ಶೇ 45.48 ಮತ್ತು ಶೇ 49.24). ಎಲ್‌ಐಸಿ ಪ್ರಸ್ತುತ ನಿರ್ವಹಣಾ ನಿಯಂತ್ರಣದೊಂದಿಗೆ ಐಡಿಬಿಐ ಬ್ಯಾಂಕಿನ ಪ್ರವರ್ತಕರಾಗಿದ್ದು, ಸರ್ಕಾರ ಸಹ-ಪ್ರವರ್ತಕವಾಗಿದೆ.
ನಿರ್ವಹಣಾ ನಿಯಂತ್ರಣ ತ್ಯಜಿಸಲು ಸಾರ್ವಜನಿಕ ವಲಯದ ಕಂಪನಿಯು ಐಡಿಬಿಐ ಬ್ಯಾಂಕಿನಲ್ಲಿ ತನ್ನ ಪಾಲು ಕಡಿಮೆಗೊಳಿಸುವುದರ ಮೂಲಕ ಮತ್ತು ಬೆಲೆ, ಮಾರುಕಟ್ಟೆ ದೃಷ್ಟಿಕೋನ, ಶಾಸನಬದ್ಧ ಷರತ್ತು ಮತ್ತು ಪಾಲಿಸಿದಾರರ ಆಸಕ್ತಿಯನ್ನು ಗಣನೆಗೆ ತೆಗೆದುಕೊಂಡು ಎಲ್‌ಐಸಿ ಮಂಡಳಿಯು ನಿರ್ಣಯವನ್ನು ಅಂಗೀಕರಿಸಿದೆ.
ಎಲ್‌ಐಸಿಯ ಮಂಡಳಿಯ ಈ ನಿರ್ಧಾರವು ಬ್ಯಾಂಕಿನಲ್ಲಿ ತನ್ನ ಪಾಲನ್ನು ಕಡಿಮೆ ಮಾಡಲು ನಿಯಂತ್ರಕ ಆದೇಶಕ್ಕೆ ಅನುಗುಣವಾಗಿರುತ್ತದೆ.