ನವದೆಹಲಿ:ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು, 'ಚೀನಾ ಕೋ ಜವಾಬ್' ಭಾಗ- 3ನೇ ವಿಡಿಯೋದಲ್ಲಿ ಲಡಾಖ್ ಗಾಲ್ವಾನ್ ಕಣಿವೆಯ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.
ಅಮೀರ್ ಖಾನ್ ಅಭಿನಯದ 3 ಈಡಿಯೆಟ್ಸ್ ಸಿನಾಮದಲ್ಲಿ ಪುಗ್ಶುಕ್ ವಾಂಗ್ಡು ಪಾತ್ರಕ್ಕೆ ಇದೇ ಸೋನಮ್ ವಾಂಗ್ಚುಕ್ ಪ್ರೇರಿತವಾಗಿದ್ದರು. ಎಂಜಿನಿಯರ್ ಆಗಿರುವ ವಾಂಗ್ಚುಕ್ ಅವರು, ಲಡಾಕ್‌ನಲ್ಲಿ ಶಿಕ್ಷಣ ಹರಿಕಾರನಾಗಿ ಖ್ಯಾತಿ ಪಡೆದಿದ್ದಾರೆ. ಚೀನಾ ನಿತ್ಯ ಭಾರತಕ್ಕೆ ಒಂದಿಲ್ಲ ಒಂದು ಸಂಕಷ್ಟ ತರುತ್ತಿದೆ. ಚೀನಿ ನಾಗರಿಕರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಅಲ್ಲಿನ ಕಮ್ಯೂನಿಸ್ಟ್ ಸರ್ಕಾರ ನಮಗೆ ತೊಂದರೆ ಕೊಡುತ್ತಿದೆ ಎಂದು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸರಣಿ ವಿಡಿಯೋ ಮೂಲಕ ಭಾರತೀಯರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಶಿಕ್ಷಣ ಸುಧಾರಕ ವಾಂಗ್ಚುಕ್, ಭಾರತೀಯ ಮಾರುಕಟ್ಟೆಯಲ್ಲಿ ಚೀನಾದ ಪ್ರಾಬಲ್ಯದ ವಿರುದ್ಧ ಹೋರಾಡಲು ಮತ್ತಷ್ಟು ಸಂಕಲ್ಪ ತೊಡಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ. "ಚೀನಾವನ್ನು ಎದುರಿಸಲು ಭಾರತೀಯ ಸೇನೆಯೊಂದಿಗೆ ಜನರ ಹೋರಾಟ ಎಂದು ನಾಗರಿಕರಿಗೆ ನೆನಪಿಸಲು ನಾನು ಇಲ್ಲಿದ್ದೇನೆ" ಎಂದು ವಾಂಗ್ಚುಕ್ ಹೇಳಿದರು.
ಚೀನಾ ನಿಖರವಾದ ಸಂಖ್ಯೆಯ ಕಾರಣಗಳನ್ನು ಹೇಳದಿರಲು ಎರಡು ಕಾರಣಗಳಿವೆ. ಅವರು ಅಪಾರ ಸಂಖ್ಯೆಯಲ್ಲಿ ಹತರಾಗಿದ್ದಾರೆ ಅಥವಾ ಕಡಿಮೆ ಸಾವುನೋವುಗಳು ಸಂಭವಿಸಿವೆ. ಮೊದಲನೇ ವಾದವು ನಿಜವಾಗಲು ಸಾಧ್ಯವಿಲ್ಲ. ಏಕೆಂದರೆ, ರಾತ್ರಿಯ ಕತ್ತಲೆಯಲ್ಲಿರುವ ಭಾರತೀಯ ಸೈನಿಕರ ಮೇಲೆ ಅವರು ಮೋಸದಿಂದ ಹಲ್ಲೆ ನಡೆಸಿದರು. ಈ ಅಪರಾಧ ಮಾಡಿದ ನಂತರ ತಮ್ಮ ತಪ್ಪನ್ನು ಮರೆಮಾಚಲು ಬಯಸುತ್ತಾರೆ. ಹೀಗಾಗಿ ಎರಡನೇ ವಾದ ನಿಜವಾಗುತ್ತೆ ಎಂದಿದ್ದಾರೆ.
"ಚೀನಾದ ಅಧಿಕಾರಿಗಳು ಸಾವಿನ ಸಂಖ್ಯೆಗಳನ್ನು ಹೊರಹಾಕುತ್ತಿಲ್ಲ. ಏಕೆಂದರೆ, ಅವರು ಭಾರತೀಯ ನಾಗರಿಕರ ಪಾಕೆಟ್ ಶಕ್ತಿಗೆ ಭಯಪಡುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.
ಅಮುಲ್ ಖಾತೆ ಅಮಾನತು, ಗೂಗಲ್ ಪ್ಲೇ ಸ್ಟೋರ್ ಚೀನಾ ವಿರೋಧಿ ಆ್ಯಪ್ ನಿಷೇಧ, ಗ್ಲೋಬಲ್ ಟೈಮ್ಸ್ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ವಾಂಗ್‌ಚುಕ್, "ಇದು ಒಳ್ಳೆಯ ಸುದ್ದಿ, ನಮ್ಮ ಕಾರ್ಯಗಳು ಫಲ ನೀಡುತ್ತಿವೆ. ಚೀನಾದಿಂದ ಆಮದು ಮಾಡಿಕೊಳ್ಳುವುದು ಭಾರತದ ಉತ್ಪಾದನೆಯ ಕುಸಿತಕ್ಕೆ ಕಾರಣವಾಗಿದೆ. ಈಗ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ನಾವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡರೆ ಮುಂಬರುವ ವರ್ಷಗಳಲ್ಲಿ ಭಾರತೀಯರು ಮತ್ತೆ ಉತ್ಪಾದನಾ ಸಾಮರ್ಥ್ಯವನ್ನು ಪಡೆಯುತ್ತಾರೆ ಎಂದು ತಿಳಿಸಿದರು.
ಚೀನಾವನ್ನು ಬಹಿಷ್ಕರಿಸುವ ಆಂದೋಲನ ಕ್ಯಾನ್ಸರ್ಗೆ ಚಿಕಿತ್ಸೆ ನೀಡುವಂತಿದೆ. ನಿಮಗೆ ಆರಂಭದಲ್ಲಿ ಸ್ವಲ್ಪ ನೋವು ಇರುತ್ತದೆ. ಆದರೆ, ಕೊನೆಯಲ್ಲಿ ನಾವು ಚೀನಾದ ಅವಲಂಬನೆಯ ಕಾಯಿಲೆಯಿಂದ ಮುಕ್ತರಾಗುತ್ತೇವೆ ಎಂದು ವಾಂಗ್ಚುಕ್ ಹೇಳಿದರು.