ಭುವನೇಶ್ವರ: ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬೈಕ್ ಮಾಲೀಕನಿಗೆ ₹ 42,500 ದಂಡದ ಚಲನ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೂತನ ಮೋಟಾರು ವಾಹನ ಕಾಯ್ದೆ 2019ರ ಪ್ರಕಾರ, ಅಪ್ರಾಪ್ತ ವಯಸ್ಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಬೈಕ್ ಸವಾರಿ ಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿ ಅಪ್ರಾಪ್ತನಿಗೆ ಬೈಕ್ ಓಡಿಸಲು ಅವಕಾಶ ನೀಡಿದ್ದಕ್ಕಾಗಿ ಮೋಟಾರ್ ಸೈಕಲ್ ಮಾಲೀಕರಿಗೆ 42,500 ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕ ಭದ್ರಾಕ್ ಜಿಲ್ಲೆಯ ಭಂಡರಿಪೋಖಾರಿ ಬ್ಲಾಕ್‌ನ ನುಪೋಖಾರಿ ಗ್ರಾಮದರಾಗಿದ್ದಾರೆ. ಜಿಲ್ಲೆಯ ನುವಾಪೋಖರಿ ಪ್ರದೇಶದ ದ್ವಿಚಕ್ರ ವಾಹನ ಮಾಲೀಕ ನಾರಾಯಣ್ ಬೆಹೆರಾ ಅವರಿಗೆ ಸಂಚಾರ ನಿಯಮ ಉಲ್ಲಂಘಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ₹ 42,500 ಚಲನ್ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಪ್ರಾಪ್ತ ಬಾಲಕ ಇತರ ಇಬ್ಬರೊಂದಿಗೆ ಗುರುವಾರ ಬೈಕ್ ಸವಾರಿ ಮಾಡುತ್ತಿದ್ದ ವೇಳೆಯಲ್ಲಿ ಭದ್ರಾಕ್ ವಲಯ ಸಂಚಾರಿ ಅಧಿಕಾರಿಗಳು (ಆರ್ಟಿಒ) ತಡೆದಿದ್ದಾರೆ. ಬಾಲಕನಿಗೆ ಬೈಕ್ ಓಡಿಸಲು ಅವಕಾಶ ಮಾಡಿಕೊಟ್ಟ ಬೈಕ್ ಮಾಲೀಕನಿಗೆ ದಂಡದ ಚಲನ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯ ನಿಯಮ ಉಲ್ಲಂಘನೆಗೆ₹ 500, ಸರಿಯಾದ ಪರವಾನಿಗೆ ಇಲ್ಲದೆ ವಾಹನ ಚಲಿಸಲು ಅವಕಾಶ ನೀಡಿದ್ದಕ್ಕೆ ₹ 5,000, ಪರವಾನಿಗೆ ಇಲ್ಲದೆ ವಾಹನ ಓಡಿಸಿದ್ದಕ್ಕೆ ₹ 5,000, ಸಂಚಾರಿ ದಟ್ಟಣೆಯ ಮಧ್ಯ ವಾಹನ ಚಲಾಯಿಸಿದ್ದಕ್ಕೆ ₹ 5,000, ಬೈಕ್ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಪ್ರಯಾಣಿಸಿದ್ದಕ್ಕೆ ₹ 1,000, ಹೆಲ್ಮೆಟ್ ಇಲ್ಲದೆ ಚಾಲನೆ ಮಾಡಿದ್ದಕ್ಕೆ ₹ 1,000 ಹಾಗೂ ಅಪ್ರಾಪ್ತನಿಗೆ ವಾಹನ ಕೊಟ್ಟ ತಪ್ಪಿಗೆ ₹ 25,000 ದಂಡ ಹಾಕಲಾಗಿದೆ ಎಂದು ದಂಡದ ಬಗ್ಗೆ ವಿವರಿಸಿದ್ದಾರೆ.
ಒಡಿಶಾ ರಾಜ್ಯ ಸಾರಿಗೆ ಪ್ರಾಧಿಕಾರವು ಈ ಬಗ್ಗೆ ಟ್ವೀಟ್ ಮಾಡಿದ್ದು, ಅಪ್ರಾಪ್ತ ಹುಡುಗನಿಗೆ ವಾಹನ ಓಡಿಸಲು ಅನುಮತಿ ನೀಡಿದ ಮಾಲೀಕರು/ ಪೋಷಕರು 25 ಸಾವಿರ ದಂಡವನ್ನು ಪಾವತಿಸಬೇಕಾಗುತ್ತದೆ. ಹುಡುಗನಿಗೆ 25 ವರ್ಷ ತುಂಬುವವರೆಗೆ ಡಿಎಲ್ ಸಿಗುವುದಿಲ್ಲ ಎಂದು ಎಚ್ಚರಿಸಿದೆ.