ಕರ್ನಾಟಕ

karnataka

ETV Bharat / business

ಔಷಧ, ವೈದ್ಯಕೀಯ ಪಾರ್ಕ್ ಸ್ಥಾಪಿಸಿ 2.5 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ: ಸದಾನಂದಗೌಡ ಅಭಯ - ವೈದ್ಯಕೀಯ ಸಾಧನ ಪಾರ್ಕ್

ಬೃಹತ್ ಔಷಧ ಮತ್ತು ವೈದ್ಯಕೀಯ ಸಾಧನ ಪಾರ್ಕ್​ಗಳ ಅಭಿವೃದ್ಧಿಯ ಕೇಂದ್ರ ಸರ್ಕಾರದ ಯೋಜನೆಗಳು 78,000 ಕೋಟಿ ರೂ. ಒಟ್ಟು ಹೂಡಿಕೆ ಆಕರ್ಷಿಸುತ್ತವೆ. ಸುಮಾರು 2.5 ಲಕ್ಷ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದರು.

Sadananda  Gowda
ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ

By

Published : Oct 1, 2020, 7:00 PM IST

ನವದೆಹಲಿ: ಭಾರತದಲ್ಲಿ ಔಷಧ ಮತ್ತು ವೈದ್ಯಕೀಯ ಸಾಧನ ಕ್ಷೇತ್ರದಲ್ಲಿ ಹೂಡಿಕೆಗೆ ಇದು ಸಕಾಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ.

“ಸಿಐಐ ಲೈಫ್ ಸೈನ್ಸ್ ಕಾನ್​​ಕ್ಲೈವ್ 2020 ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ವ್ಯಾಪಾರ ಸ್ನೇಹಿ ಸುಧಾರಣೆಗಳಿಂದಾಗಿ ಉದಯೋನ್ಮುಖ ಆರ್ಥಿಕತೆಗಳಲ್ಲಿ ಭಾರತವು ಅತ್ಯುತ್ತಮ ಹೂಡಿಕೆಯ ತಾಣಗಳಲ್ಲಿ ಒಂದಾಗಿ ಹೊರ ಹೊಮ್ಮಲು ಕಾರಣವಾಗಿದೆ. ಹಣಕಾಸಿನ ಸೇರ್ಪಡೆ ಉತ್ತೇಜಿಸಲು, ಭ್ರಷ್ಟಾಚಾರ ತಡೆಗಟ್ಟಲು ಮತ್ತು ಕಾರ್ಮಿಕ ಕಾನೂನುಗಳು ಹಾಗೂ ನಿಬಂಧನೆಗಳ ಅನುಸರಣೆಯನ್ನು ಸರಾಗಗೊಳಿಸುವ ನೀತಿಗಳನ್ನು ಜಾರಿಗೊಳಿಸಿರುವುದು ಭಾರತವನ್ನು ಹೂಡಿಕೆಗೆ ಉತ್ತಮ ತಾಣವಾಗಿ ಮಾಡಿದೆ. 2018-19ರಲ್ಲಿ ಭಾರತವು 73 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ ಆಕರ್ಷಿಸಿತ್ತು. ಇದು ಹಿಂದಿನ ವರ್ಷಕ್ಕಿಂತ ಶೇ. 18 ರಷ್ಟು ಹೆಚ್ಚಾಗಿದೆ ಎಂದರು.

ಔಷಧ ಮತ್ತು ವೈದ್ಯಕೀಯ ಸಾಧನ ಕ್ಷೇತ್ರವನ್ನು ವಿಶೇಷವಾಗಿ ಪ್ರಸ್ತಾಪಿಸಿದ ಅವರು, ಭಾರತದಲ್ಲಿ ಈ ವಲಯದಲ್ಲಿ ಹೂಡಿಕೆ ಮಾಡಲು ಇದು ಅತ್ಯಂತ ಸೂಕ್ತ ಸಮಯವಾಗಿದೆ. ಏಕೆಂದರೆ ಈ ಉದ್ಯಮವು 2024 ರ ವೇಳೆಗೆ 65 ಬಿಲಿಯನ್ ಡಾಲರ್ ಮತ್ತು 2030 ರ ವೇಳೆಗೆ 120 ಬಿಲಿಯನ್ ಡಾಲರ್‌ಗಳಿಗೆ ಬೆಳೆಯುವ ಸಾಧ್ಯತೆಯಿದೆ ಎಂದರು.

ಮುಂದಿನ 4-5 ವರ್ಷಗಳಲ್ಲಿ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ಭಾರತೀಯ ಔಷಧ ಮತ್ತು ವೈದ್ಯಕೀಯ ಸಾಧನ ಕ್ಷೇತ್ರವು ಅಪಾರ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿನ ವೈದ್ಯಕೀಯ ಸಾಧನಗಳ ಉದ್ಯಮವು 2025ರ ವೇಳೆಗೆ ಶೇ 28 ರಷ್ಟು ಬೆಳವಣಿಗೆಯಾಗಲಿದ್ದು, 50 ಬಿಲಿಯನ್ ಡಾಲರ್ ತಲುಪುವ ಸಾಮರ್ಥ್ಯ ಹೊಂದಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಮೂರು ಬೃಹತ್ ಔಷಧ ಪಾರ್ಕ್ ಮತ್ತು ನಾಲ್ಕು ವೈದ್ಯಕೀಯ ಸಾಧನ ಪಾರ್ಕ್​ಗಳ ಅಭಿವೃದ್ಧಿ ಪಡಿಸುತ್ತಿದೆ. ದೇಶೀಯ ಉತ್ಪಾದಕರಿಗೆ ಸೂಕ್ತ ವಾತಾವರಣ ಖಚಿತಪಡಿಸಿಕೊಳ್ಳಲು ಅರ್ಹ ಹೊಸ ಉತ್ಪಾದನಾ ಘಟಕಗಳಿಗೆ ಉತ್ಪಾದನಾಧಾರಿತ ಪ್ರೋತ್ಸಾಹಕಗಳನ್ನು (ಪಿಎಲ್ಐ) ಸರ್ಕಾರ ನೀಡುತ್ತದೆ ಎಂದು ತಿಳಿಸಿದರು.

ಭಾರತದ ಔಷಧ ಮತ್ತು ವೈದ್ಯಕೀಯ ಸಾಧನಗಳ ಉದ್ಯಮವು ಈ ಸಂದರ್ಭಕ್ಕೆ ಸೂಕ್ತವಾಗಿ ಸ್ಪಂದಿಸಿದೆ. ಸೂಕ್ತ ನೀತಿಗಳನ್ನು ಜಾರಿಗೊಳಿಸಿ ಬೃಹತ್ ಔಷಧ ಮತ್ತು ವೈದ್ಯಕೀಯ ಸಾಧನ ಪಾರ್ಕ್ ಅಭಿವೃದ್ಧಿಗೆ ಬೆಂಬಲ ನೀಡುವ ಮೂಲಕ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಪರಿಕಲ್ಪನೆಯ ಆರಂಭಿಕ ಹಂತದಿಂದಲೂ ವೈಯಕ್ತಿಕವಾಗಿ ಇದರಲ್ಲಿ ಭಾಗಿಯಾಗಿದ್ದಾರೆ. ಬೃಹತ್ ಔಷಧ ಮತ್ತು ವೈದ್ಯಕೀಯ ಸಾಧನ ಪಾರ್ಕ್​​ಗಳ ಅಭಿವೃದ್ಧಿಯ ಕೇಂದ್ರ ಸರ್ಕಾರದ ಈ ಯೋಜನೆಗಳು 78,000 ಕೋಟಿ ರೂ. ಒಟ್ಟು ಹೂಡಿಕೆ ಆಕರ್ಷಿಸುತ್ತದೆ. ಸುಮಾರು 2.5 ಲಕ್ಷ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಪಿಪಿಇ ಕಿಟ್‌ಗಳ ಸಂಪೂರ್ಣ ಆಮದುದಾರನಾಗಿದ್ದ, ಭಾರತವು ಈಗ ಅವುಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಪಿಪಿಇ ಕಿಟ್‌ಗಳ ಉತ್ಪಾದನಾ ಸಾಮರ್ಥ್ಯವು ದಿನಕ್ಕೆ 5 ಲಕ್ಷಕ್ಕೂ ಅಧಿಕವಾಗಿದೆ ಎಂಬುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಬಹಳ ಕಡಿಮೆ ಅವಧಿಯಲ್ಲಿ, ವೆಂಟಿಲೇಟರ್‌ಗಳ ಸ್ಥಳೀಯ ಉತ್ಪಾದನಾ ಸಾಮರ್ಥ್ಯವು ವರ್ಷಕ್ಕೆ 3 ಲಕ್ಷಕ್ಕೆ ಏರಿದೆ. ಎನ್ - 95 ಮುಖಗವಸುಗಳ ಉತ್ಪಾದನೆಯಲ್ಲಿ ನಾವು ಸ್ವಾವಲಂಬನೆ ಸಾಧಿಸಿದ್ದೇವೆ ಎಂದು ವಿವರಿಸಿದರು.

ಔಷಧಗಳ ಜಾಗತಿಕ ಪೂರೈಕೆದಾರರಲ್ಲಿ ಪ್ರಮುಖರಾಗಿ ಉಳಿಯಲು ಫಾರ್ಮಾ ಉದ್ಯಮವು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳತ್ತ ಗಮನ ಹರಿಸಬೇಕು. ಭಾರತದಲ್ಲಿ ಹೊಸ ಔಷಧದ ಆವಿಷ್ಕಾರ ಅಥವಾ ಮರು ಹಂಚಿಕೆ ಮಾಡದ ಹೊರತು ಈ ಉದ್ಯಮದ ಬೆಳವಣಿಗೆಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಕಡಿಮೆ ವೆಚ್ಚದ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಪೂರೈಸುವ ಮೊದಲಿಗರಲ್ಲಿ ಭಾರತದ ಔಷಧ ವಲಯವೂ ಸೇರಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ABOUT THE AUTHOR

...view details