ನವದೆಹಲಿ :ಪೂರ್ವ ಲಡಾಖ್‌ನಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದ ಬಳಿಕ ಮುಂದಿನ ವಾರ ನಡೆಯುವ ಸಭೆಯಲ್ಲಿ ಚೀನಾದ ಮೊಬೈಲ್ ಉತ್ಪಾದನಾ ಕಂಪನಿ ವಿವೊ ಜೊತೆಗಿನ ಐಪಿಎಲ್ ಪ್ರಾಯೋಜಕತ್ವದ ಒಪ್ಪಂದ ಪರಿಶೀಲಿಸುವುದಾಗಿ ಬಿಸಿಸಿಐ ತಿಳಿಸಿದೆ.
ಐಪಿಎಲ್ ಆಡಳಿತ ಮಂಡಳಿಯ ಸಭೆಯು ವಿವೊ ಜೊತೆಗೆ ವಾರ್ಷಿಕ ₹ 440 ಕೋಟಿ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದ ಪರಿಶೀಲಿಸುತ್ತದೆ. ನಮ್ಮ ಕೆಚ್ಚೆದೆಯ ಯೋಧರು ಹುತಾತ್ಮರಾಗಲು ಕಾರಣವಾದ ಗಡಿ ಚಕಮಕಿಯನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಆಡಳಿತ ಮಂಡಳಿ ಮುಂದಿನ ವಾರ ಐಪಿಎಲ್ನ ವಿವಿಧ ಪ್ರಾಯೋಜಕತ್ವದ ಒಪ್ಪಂದಗಳ ಪರಿಶೀಲನಾ ಸಭೆ ಕರೆದಿದೆ ಎಂದು ಅಧಿಕೃತ ಐಪಿಎಲ್ ಖಾತೆಯಲ್ಲಿ ಶುಕ್ರವಾರ ತಡರಾತ್ರಿ ಟ್ವೀಟ್ ಮಾಡಿದೆ.
ವಿವೊ ಹೊರತುಪಡಿಸಿ ಪೇಟಿಎಂ ಸಹ ಪ್ರಾಯೋಜಕರಲ್ಲಿ ಒಬ್ಬರಾಗಿದ್ದಾರೆ. ಕಂಪನಿಯು ಚೀನಾದ ಸಂಸ್ಥೆ ಅಲಿಬಾಬಾ ತನ್ನ ಹೂಡಿಕೆದಾರರಲ್ಲಿ ಒಬ್ಬರನ್ನಾಗಿ ಹೊಂದಿದೆ. ಅಲಿಬಾಬಾ ಪೇಟಿಎಂನಲ್ಲಿ ಶೇ 37.15ರಷ್ಟು ಪಾಲನ್ನು ಹೊಂದಿದೆ. ಇದು ಬಿಸಿಸಿಐನ ಪ್ರಧಾನ ಪ್ರಾಯೋಜಕರಲ್ಲಿ ಒಂದಾಗಿದೆ.
ವಿಶ್ವದ ಅತಿದೊಡ್ಡ ವಿಡಿಯೋ ಗೇಮ್ ಕಂಪನಿಗಳಲ್ಲಿ ಒಂದಾದ ಟೆನ್ಸೆಂಟ್, ಸ್ವಿಗ್ಗಿಯಲ್ಲಿ 5.27 ಪ್ರತಿಶತ ಮತ್ತು ಡ್ರೀಮ್ 11ನಲ್ಲಿ ಬಹುಪಾಲು ಪಾಲು ಹೊಂದಿದೆ. ಈ ಎಲ್ಲಾ ಕಂಪನಿಗಳು ಮಂಡಳಿಯ ಪ್ರಾಯೋಜಕರ ಪಟ್ಟಿಯಲ್ಲಿ ಸೇರಿವೆ. ಇದಲ್ಲದೆ ಬಿಸಿಸಿಐನ ರಾಷ್ಟ್ರೀಯ ತಂಡದ ಜರ್ಸಿ ಪ್ರಾಯೋಜಕತ್ವವನ್ನು ಬೆಂಗಳೂರು ಮೂಲದ ಬೈಜುಸ್ ಶೈಕ್ಷಣಿಕ ತಂತ್ರಜ್ಞಾನದೊಂದಿಗೆ ಕಳೆದ ವರ್ಷದಿಂದ ಐದು ವರ್ಷಗಳವರೆಗೆ 1,079 ಕೋಟಿ ರೂ ಪಾವತಿಸಿದೆ. ಬೈಜುಸ್‌ನಲ್ಲಿ ಟೆನ್ಸೆಂಟ್ ಪಾಲು ಸಹ ಇದೆ. 2022ರವರೆಗೆ ನಿರ್ಗಮನ ಷರತ್ತು ಆಹ್ವಾನಿಸಬೇಕೇ ಅಥವಾ ವಿವೋ ಅವರ ಒಪ್ಪಂದವನ್ನು ಗೌರವಿಸಬೇಕೇ ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಪೇಟಿಎಂ ಮತ್ತು ಬೈಜುಸ್ ಭಾರತೀಯ ತಂಡಕ್ಕೆ ಸಂಬಂಧಿಸಿವೆ. ಮೊದಲ ಆದ್ಯತೆಯೆಂದರೆ ಐಪಿಎಲ್ ಪ್ರಾಯೋಜಕತ್ವಗಳಾದ ವಿವೋ, ಡ್ರೀಮ್ 11 ಮತ್ತು ಸ್ವಿಗ್ಗಿ. ಇವು ಚೀನೀ ಹೂಡಿಕೆಗಳನ್ನು ಹೊಂದಿವೆ. ಪೇಟಿಎಂ ಮತ್ತು ಬೈಜುಸ್ ಬಗ್ಗೆ ಒಂದೇ ರೀತಿ ಹೇಳಲು ಸಾಧ್ಯವಿಲ್ಲ. ಆದರೆ, ಇದು ಚರ್ಚೆಗೆ ಬರಬಹುದು ಎಂದು ಐಪಿಎಲ್ ಆಡಳಿತ ಮಂಡಳಿ ಸದಸ್ಯರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಬಿಸಿಸಿಐ ಖಜಾಂಜಿ ಲಾಭದ ಹೇಳಿಕೆ :ಐಪಿಎಲ್‌ಗೆ ಪ್ರಾಯೋಜಕತ್ವ ನೀಡಿರುವ ವಿವೊ ಮೊಬೈಲ್ ಚೀನಾ ಕಂಪನಿಯಾಗಿದೆ. ಇದರಿಂದ ಪ್ರತಿ ವರ್ಷ 440 ಕೋಟಿ ರೂ. ಆದಾಯ ಬಿಸಿಸಿಐಗೆ ಬರುತ್ತಿದೆ. 2022ರವರೆಗೂ ಮಂಡಳಿ ಒಪ್ಪಂದ ಮಾಡಿ ಕೊಂಡಿದೆ. ಮಂಡಳಿಗೆ ಇದು ಪ್ರಮುಖ ಆದಾಯ. ಇದರಿಂದ ದೇಶಕ್ಕೂ ಪ್ರಯೋಜನವಾಗುತ್ತಿದೆ. ಭಾರತದಲ್ಲಿ ಚೀನಾ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿದೆ. ಇಲ್ಲಿಯ ಗ್ರಾಹಕರಿಂದ ಲಾಭ ಪಡೆಯುತ್ತದೆ. ಆ ಉತ್ಪನ್ನದ ಪ್ರಚಾರಕ್ಕಾಗಿ ವೇದಿಕೆ ಒದಗಿಸಲು ಬಿಸಿಸಿಐಗೆ ಪ್ರಾಯೋಜಕತ್ವದ ರೂಪದಲ್ಲಿ ದುಡ್ಡು ನೀಡುತ್ತದೆ. ನಾವು ಪಡೆಯುವ ಆ ಹಣದ ಶೇ.42ರಷ್ಟು ತೆರಿಗೆಯನ್ನು ಭಾರತ ಸರ್ಕಾರಕ್ಕೆ ಪಾವತಿಸುತ್ತೇವೆ. ಆದ್ದರಿಂದ ಇದು ನಮ್ಮ ದೇಶಕ್ಕೆ ಲಾಭ, ಚೀನಾಕ್ಕಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ನಿನ್ನೆ ಹೇಳಿಕೆ ನೀಡಿದ್ದರು.