ನವದೆಹಲಿ:ಸಾರ್ವಜನಿಕ ವಲಯದ ಬ್ಯಾಂಕ್ಗಳ ವಿಲೀನ ವಿರೋಧಿಸಿ ನಾಲ್ಕು ಬ್ಯಾಂಕ್ ಅಧಿಕಾರಿಗಳ ಸಂಘಗಳು ಸೆಪ್ಟೆಂಬರ್ 26 ಮತ್ತು 27ರಂದು ಎರಡು ದಿನ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.
ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿರುವುದರಿಂದ ಕರ್ನಾಟಕದಲ್ಲೂ ಬ್ಯಾಂಕ್ಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಸೆ.25ರ ಮಧ್ಯರಾತ್ರಿಯಿಂದ 27ರ ಮಧ್ಯರಾತ್ರಿಯವರೆಗೆ ಬ್ಯಾಂಕ್ ಸೇವೆ ಕಡಿತವಾಗಲಿದೆ. ಜೊತೆಗೆ ಸೆ.28ರಂದು 4ನೇ ಶನಿವಾರ ಹಾಗೂ 29ರಂದು ಭಾನುವಾರದ ರಜೆ ಇರಲಿದೆ. ಸತತವಾಗಿ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆ ಸ್ಥಗಿತಗೊಳ್ಳಲಿದೆ.
ಈ ಅವಧಿಯಲ್ಲಿ ಬ್ಯಾಂಕ್ಗಳ ಯಾವುದೇ ಸೇವೆಗಳು ಸಾರ್ವಜನಿಕರಿಗೆ ಲಭಿಸುವುದಿಲ್ಲ. ಸೆಪ್ಟೆಂಬರ್ 24ಕ್ಕೂ ಮೊದಲೇ ಬ್ಯಾಂಕಿಂಗ್ ಮತ್ತು ಹಣಕಾಸು ಕೆಲಸಗಳನ್ನು ಮುಗಿಸಿಕೊಳ್ಳುವುದು ಉತ್ತಮ. ಅಗತ್ಯವಾದ ಹಣ ಇರಿಸಿಕೊಳ್ಳುವಿಕೆ, ಹಣ ಪಾವತಿ, ಮನಿ ಟ್ರಾನ್ಸ್ಪಫರ್, ಸಾಲದ ಕಂತು ಪಾವತಿ ಸೇರಿದಂತೆ ಇತರೆ ಕೆಲಸಗಳನ್ನು ಪ್ರತಿಭಟನೆಗೂ ಮುನ್ನ ಮುಗಿಸಿಕೊಳ್ಳುವುದು ಉತ್ತಮ.
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್ಬಿಒಸಿ) ಮತ್ತು ನ್ಯಾಷನಲ್ ಆರ್ಗನೈಸೇಷನ್ ಆಫ್ ಬ್ಯಾಂಕ್ ಅಧಿಕಾರಿಗಳ (ನೊಬೊ) ಜಂಟಿಯಾಗಿ ಮುಷ್ಕರ ನಡೆಸಲಿವೆ.