ಚೆನ್ನೈ :ಸರ್ಕಾರಿ ಬ್ಯಾಂಕ್ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ನೌಕರರ ಒಕ್ಕೂಟ, ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದ್ದರಿಂದ ಚೆಕ್ ಕ್ಲಿಯರೆನ್ಸ್ ಸೇರಿ ಇತರೆ ಬ್ಯಾಂಕ್ ವಹಿವಾಟಿನಲ್ಲಿ ವ್ಯತ್ಯಯ ಕಂಡು ಬಂತು.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಕರೆ ಕೊಟ್ಟ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ಸೋಮವಾರ ಆರಂಭವಾಗಿದೆ. ಸುಮಾರು 16,500 ಕೋಟಿ ರೂ. ಮೌಲ್ಯದ ಎರಡು ಕೋಟಿ ಚೆಕ್ ಕ್ಲಿಯರೆನ್ಸ್ ಮೇಲೆ ಪ್ರತಿಭಟನೆ ಪರಿಣಾಮ ಬೀರಿದ್ದು, ಇದರಿಂದ ಒಕ್ಕೂಟದ ಮುಖಂಡರು ಯಶಸ್ಸು ಸಾಧಿಸಿದ್ದಾರೆ.
ಪ್ರತಿಭಟನೆಯಿಂದ ಸರಾಸರಿ ಸುಮಾರು 16,500 ಕೋಟಿ ರೂ. ಮೌಲ್ಯದ ಸುಮಾರು 2 ಕೋಟಿ ಚೆಕ್ ಕ್ಲಿಯರೆನ್ಸ್ಗೆ ಹಿನ್ನಡೆಯಾಗಲಿದೆ. ಸರ್ಕಾರಿ ಖಜಾನೆ ಕಾರ್ಯಾಚರಣೆಗಳು ಮತ್ತು ಎಲ್ಲಾ ಸಾಮಾನ್ಯ ಬ್ಯಾಂಕಿಂಗ್ ವಹಿವಾಟುಗಳ ಮೇಲೆ ಪರಿಣಾಮ ಬೀರಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ ಹೆಚ್ ವೆಂಕಟಾಚಲಂ ತಿಳಿಸಿದ್ದಾರೆ.
ಸುಮಾರು 10 ಲಕ್ಷ ಬ್ಯಾಂಕ್ ಉದ್ಯೋಗಿಗಳು ಹಾಗೂ ನೌಕರರು ತಮ್ಮ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರ ಖಂಡಿಸಿದ್ದಾರೆ ಎಂಬುದಕ್ಕೆ ಪ್ರತಿಭಟನೆಗೆ ಸಿಕ್ಕ ಬೆಂಬಲವೇ ಸಾಕ್ಷಿ. ಎಲ್ಲಾ ಕೇಂದ್ರಗಳಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿವೆ ಎಂಬುದು ವಿವಿಧ ರಾಜ್ಯಗಳಿಂದ ನಮಗೆ ಮಾಹಿತಿ ತಲುಪಿದೆ ಎಂದರು.