ನವದೆಹಲಿ:ಯಾವುದೇ ಹಂತದಲ್ಲಿ, ಎಂತಹುದೇ ಪರಿಸ್ಥಿತಿಯಲ್ಲಿ ಉದ್ಯಮಿ ವಲಯಕ್ಕೆ ಕಷ್ಟವಾಗದಂತೆ ನೋಡಿಕೊಳ್ಳಲು ಬಯಸುತ್ತೇವೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.
ಶುಕ್ರವಾರ ಭಾರತೀಯ ಉದ್ಯಮಿಗಳ ಒಕ್ಕೂಟದ (ಸಿಐಐ) ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ತೆರಿಗೆ, ಮೂಲಸೌಕರ್ಯ, ಆರ್‌ಬಿಐ ಮತ್ತು ಸರ್ಕಾರದ ಸಂಬಂಧ ವೃದ್ಧಿ, ವಿಳಂಬವಾದ ಪಾವತಿ ತಡೆ ಮತ್ತು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳಂತಹ (ಸಿಎಸ್‌ಆರ್) ಅಂಶಗಳೇ ನಮ್ಮ ಮೊದಲ ಆದ್ಯತೆ ಆಗಿರುತ್ತದೆ ಎಂದು ಹೇಳಿದರು.
ಕಾರ್ಪೊರೇಟ್‌ಗಳ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡುವುದು ನಮ್ಮ ಉದ್ದೇಶ. ಈ ವಿಷಯದಲ್ಲಿ ದ್ವಿಮುಖ ನೀತಿ ಅನುಸರಿಸುವ ಪ್ರಶ್ನೆಯೇ ಇಲ್ಲ. ತೆರಿಗೆ ಆದಾಯ ಸಂಗ್ರಹ ಮೇಲ್ಮುಖದ ಪ್ರವೃತ್ತಿಯಲ್ಲಿದೆ ಎಂಬ ಸಮಾಧಾನದ ವರದಿ ಬಂದ ಬಳಿಕವೇ ಸರ್ಕಾರವು ಎಲ್ಲ ವರ್ಗದ ಕಾರ್ಪೊರೇಟ್‌ಗಳಿಗೆ ಶೇ 25 ಪ್ರತಿಶತದಷ್ಟು ತೆರಿಗೆ ದರ ಕಡಿತಗೊಳಿಸಲಿದೆ ಎಂದು ಆಶ್ವಾಸನೆ ನೀಡಿದರು.