ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಯತ್ತ ಚಂದಾದಾರರ ವಿಶ್ವಾಸ ವೃದ್ಧಿಯ ಸಂಕೇತವಾಗಿ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ನಿರ್ವಹಣೆ ಅಡಿ ಇರುವ ಆಸ್ತಿಗಳ ಮೊತ್ತ 6 ಲಕ್ಷ ಕೋಟಿ ರೂ. ದಾಟಿದೆ. ಈ ಪೈಕಿ ಕಳೆದ ಏಳು ತಿಂಗಳಲ್ಲಿ ಕೇವಲ 1 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಸೇರ್ಪಡೆಯಾಗಿದೆ ಎಂದು ಇತ್ತೀಚಿನ ಅಂಕಿ - ಅಂಶಗಳು ತಿಳಿಸಿವೆ.
ಪಿಎಫ್‌ಆರ್‌ಡಿಎ ಪ್ರಕಾರ, ಎನ್‌ಪಿಎಸ್ ಮತ್ತು ಅಟಲ್ ಪಿಂಚಣಿ ಯೋಜನೆಯಡಿ ಒಟ್ಟು ಚಂದಾದಾರರ ಸಂಖ್ಯೆ ಮೇ 21ರ ವೇಳೆಗೆ 4.28 ಕೋಟಿ ಗ್ರಾಹಕರನ್ನು ದಾಟಿದೆ. ಅಸೆಟ್ ಅಂಡರ್ ಮ್ಯಾನೇಜ್‌ಮೆಂಟ್ (ಎಯುಎಂ) 6,03,667 ಕೋಟಿ ರೂ.ಗೆ ಏರಿಕೆಯಾಗಿದೆ.
ಇದನ್ನೂ ಓದಿ: ಕೊಂಡ ಕಾರು ಇಷ್ಟವಾಗದಿದ್ದರೇ ಖರೀದಿಸಿದ 30 ದಿನಗಳಲ್ಲಿ ಗ್ರಾಹಕರಿಗೆ ದುಡ್ಡು ವಾಪಸ್!
ಎನ್‌ಪಿಎಸ್ ಯೋಜನೆಯಲ್ಲಿ 74.10 ಲಕ್ಷ ಸರ್ಕಾರಿ ನೌಕರರು ಮತ್ತು ಸರ್ಕಾರೇತರ ವಲಯದಿಂದ 28.37 ಲಕ್ಷ ವೈಯಕ್ತಿಕ ಚಂದಾ ದಾರರಿದ್ದಾರೆ.
ಪಿಎಫ್‌ಆರ್‌ಡಿಎ ಹಂಚಿಕೊಂಡ ಮಾಹಿತಿಯ ಪ್ರಕಾರ, 2021ರ ಮೇ 21ರ ವೇಳೆಗೆ 11.53 ಲಕ್ಷ ಚಂದಾದಾರರೊಂದಿಗೆ 8,791 ಕಾರ್ಪೊರೇಟ್ ದಾಖಲಾತಿಗಳಿದ್ದರೆ, ಅಟಲ್ ಪಿಂಚಣಿ ಯೋಜನೆಯಡಿ 2.82 ಕೋಟಿ ಚಂದಾದಾರರು ದಾಖಲಾಗಿದ್ದಾರೆ.
ಸರ್ಕಾರಿ ನೌಕರರಿಗಾಗಿ ಕೇಂದ್ರ ಸರ್ಕಾರ 2004 ರಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಪ್ರಾರಂಭಿಸಿತ್ತು. 2009ರಲ್ಲಿ 18ರಿಂದ 65 ವರ್ಷದೊಳಗಿನ ಅರ್ಹ ಚಂದಾದಾರರಿಗೆ ಈ ಯೋಜನೆ ತೆರೆಯಲಾಯಿತು.
ಕೇಂದ್ರ ಮತ್ತು ರಾಜ್ಯಗಳೆರಡೂ ಸರ್ಕಾರಿ ನೌಕರರಿಗೆ ವ್ಯಾಖ್ಯಾನಿಸಲಾದ ಪಿಂಚಣಿ ಪ್ರಯೋಜನಗಳನ್ನು ಹಿಂತೆಗೆದು ಕೊಂಡಿವೆ. ಎನ್‌ಪಿಎಸ್‌ನಲ್ಲಿ ದಾಖಲಾತಿಗಳನ್ನು ಉತ್ತೇಜಿಸಿದ ಕಾರಣ ಎನ್‌ಪಿಎಸ್ ಮಾದರಿಯನ್ನು ನಂತರ ಎಲ್ಲ ರಾಜ್ಯ ಸರ್ಕಾರಗಳು ಅನುಸರಿಸಿದವು.