ನವದೆಹಲಿ:ಕರ್ನಾಟಕದಲ್ಲಿ ಆಂಟಿವೈರಲ್ ಔಷಧ ರೆಮ್ಡೆಸಿವಿರ್ ಲಭ್ಯತೆ ಪರಿಶೀಲಿಸಿದ ನಂತರ, ಏಪ್ರಿಲ್ 30ರವರೆಗೆ ರಾಜ್ಯಕ್ಕೆ ನಿಗದಿಪಡಿಸಿದ ಹಂಚಿಕೆಗಿಂತ ಹೆಚ್ಚುವರಿಯಾಗಿ 25 ಸಾವಿರ ಬಾಟಲ್ ವಿತರಣೆಗೆ ನಿರ್ಧರಿಸಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.
ಕೋವಿಡ್-19 ಚಿಕಿತ್ಸೆಯಲ್ಲಿ ಬಳಸಲಾಗುವ ರೆಮ್ಡೆಸಿವಿರ್ ಮೇಲಿನ ಕಸ್ಟಮ್ಸ್ ಸುಂಕ ಮನ್ನಾ ಮಾಡುವ ಸರ್ಕಾರದ ನಿರ್ಧಾರವು ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಔಷಧ ಪೂರೈಕೆ ಹೆಚ್ಚಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಕರ್ನಾಟಕ ರಾಜ್ಯದಲ್ಲಿ ರೆಮ್ಡೆಸಿವಿರ್ ಲಭ್ಯತೆಯ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. 2021ರ ಏಪ್ರಿಲ್ 30ರವರೆಗೆ ಕರ್ನಾಟಕಕ್ಕೆ ಮೀಸಲಾದ ಮೇಲಿನ ಹಂಚಿಕೆಯ ಮೇಲೆ ಹೆಚ್ಚುವರಿಯಾಗಿ 25,000 ಬಾಟಲ್ ಹಂಚಿಕೆ ಮಾಡಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಸಚಿವರು, ರೆಮ್ಡೆಸಿವಿರ್ ಅನ್ನು ರಾಜ್ಯಗಳಿಗೆ ಹಂಚುವ ಪ್ರಕ್ರಿಯೆಯು ಕ್ರಿಯಾತ್ಮಕ ಪ್ರಕ್ರಿಯೆಯಾಗಿದ್ದು, ಮುಂದಿನ ದಿನಗಳಲ್ಲಿ ಇದರ ಉತ್ಪಾದನೆಯು ದ್ವಿಗುಣಗೊಳ್ಳುವ ಸಾಧ್ಯತೆ ಇರುವುದರಿಂದ ವರ್ಧಿತವಾಗಿ ಹಂಚಿಕೆ ಮಾಡಲಾಗುವುದು. ನಿರ್ಣಾಯಕ ಔಷಧದ ಬೇಡಿಕೆಯ ಮೇಲಿನ ಒತ್ತಡ ಕಡಿಮೆ ಮಾಡಲು ಪರ್ಯಾಯ ಔಷಧಗಳನ್ನು ಶಿಫಾರಸು ಮಾಡುವಂತೆ ವೈದ್ಯರಿಗೆ ಕೋರಿದರು.
ರೆಮ್ಡೆಸಿವಿರ್ ಕೇವಲ ಪರೀಕ್ಷಾರ್ಥ ಔಷಧವಾಗಿದೆ. ತುರ್ತು ಸಂದರ್ಭಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ಇತರ ಪರ್ಯಾಯ ಔಷಧಿಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಾಗಿವೆ. ರೆಮ್ಡೆಸಿವಿರ್ ಬೇಡಿಕೆಯ ಮೇಲಿನ ಒತ್ತಡ ಕಡಿಮೆ ಮಾಡಲು ಪರ್ಯಾಯಗಳನ್ನು ಶಿಫಾರಸು ಮಾಡಲು ವೈದ್ಯರನ್ನು ಕೋರಲಾಗಿದೆ ಎಂದು ಗೌಡರು ಟ್ವೀಟ್ ಮಾಡಿದ್ದಾರೆ.