ನವದೆಹಲಿ : ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಗ್ರೂಪ್‌ನಲ್ಲಿ ನಡೆದಿರುವ ₹ 8,100 ಕೋಟಿ ಬ್ಯಾಂಕ್ ಸಾಲ ಹಗರಣಕ್ಕೆ ಸಂಬಂಧಿಸಿದ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಉದ್ಯಮಿ ಹಿತೇಶ್ ಪಟೇಲ್‌ನನ್ನು ಬಂಧಿಸಲಾಗಿದೆ.
ಅಲ್ಬಾನಿಯಾ ದ್ವೀಪ ರಾಷ್ಟ್ರದಲ್ಲಿ ಪೊಲೀಸರು ಹಿತೇಶ್ ಪಟೇಲ್‌ನನ್ನು ಬಂಧಿಸಿದ್ದಾರೆ. ಈತ ಭಾರತಕ್ಕೆ ಶೀಘ್ರ ಗಡಿಪಾರಾಗುವ ನಿರೀಕ್ಷೆಯಲ್ಲಿದ್ದಾರೆ .
ಹಗರಣದ ಪ್ರಮುಖ ಆರೋಪಿಗಳಾದ ನಿತಿನ್ ಮತ್ತು ಚೇತನ್ ಸಂದೇಸರ ಅವರ ಸಂಬಂಧಿ ಆಗಿರುವ ಹಿತೇಶ್ ವಿರುದ್ಧ ಕಳೆದ ಮಾರ್ಚ್ 11ರಂದು ಇಂಟರ್‌ಪೊಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.ಸ್ಟರ್ಲಿಂಗ್ ಬಯೋಟೆಕ್ ಗ್ರೂಪ್ ಔಷಧಿ ಕಂಪನಿಯಲ್ಲಿ 2004 ಮತ್ತು 2012ರ ನಡುವೆ ಭಾರತೀಯ ಬ್ಯಾಂಕ್‌ಗಳಿಂದ ₹ 8,100 ಕೋಟಿ ಸಾಲ ಪಡೆದು ವಂಚಿಸಿದ ಪ್ರಕರಣದಡಿ ಉದ್ಯಮಿ ಹಿತೇಶ್ ಪಟೇಲ್ ಸೇರಿದಂತೆ ಇತರರ ವಿರುದ್ಧ ದೂರ ದಾಖಲಾಗಿತ್ತು.
ಪ್ರಮುಖ ಆರೋಪಿಗಳು ನೂರಾರು ನಕಲಿ ಕಂಪನಿಗಳ ಮೂಲಕ ಈ ಹಗರಣ ನಡೆಸಿದ್ದರು. ಯುಎಇ, ಅಮೆರಿಕ, ಬ್ರಿಟನ್, ಮಾರಿಷಸ್, ನೈಜೀರಿಯಾ ಮುಂತಾದ ಕಡೆಗಳಲ್ಲಿಯೂ ನಕಲಿ ಕಂಪನಿಗಳನ್ನು ಹೊಂದಿದ್ದರು. ಆಂಧ್ರ ಬ್ಯಾಂಕ್, ಯುಕೋ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್ ಮತ್ತು ಬ್ಯಾಂಕ್ ಇಂಡಿಯಾದಿಂದ ಸಾಲ ಪಡೆದಿದ್ದರು.