ನವದೆಹಲಿ:ದೇಶದಲ್ಲಿನ ಚೀನಾ ವಿರೋಧಿ ಮನಸ್ಥಿತಿ ದಿನೇದಿನೆ ಹೆಚ್ಚಾಗುತ್ತಿದೆ. ಶೇ.97ರಷ್ಟು ಜನ ಚೀನಾದ ಪ್ರಮುಖ ಬ್ರಾಂಡ್‌ಗಳಾದ ಶಿಯೋಮಿ,ವಿವೊ, ಒಪ್ಪೊ, ವೀಚಾಟ್, ಟಿಕ್ಟಾಕ್ ಬಳಕೆ ಹಾಗೂ ಖರೀದಿಯನ್ನು ಬಹಿಷ್ಕರಿಸುವುದಾಗಿ ಹೇಳುತ್ತಿದ್ದಾರೆ ಎಂದು ಸ್ಥಳೀಯ ವಲಯಗಳ ಸಮೀಕ್ಷೆಯೊಂದು ತಿಳಿಸಿದೆ.
ಇತ್ತೀಚಿನ ಭಾರತ-ಚೀನಾದ ಗಡಿ ಉದ್ವಿಗ್ನದಿಂದಾಗಿ ಮುಂದಿನ 1 ವರ್ಷಕ್ಕೆ ಚೀನಾದ ಉತ್ಪನ್ನಗಳನ್ನು ಖರೀದಿಸುವುದನ್ನು ಬಹಿಷ್ಕರಿಸಲು ಸಿದ್ಧರಿದ್ದೇವೆ ಎಂದು ಶೇ.87ರಷ್ಟು ಭಾರತೀಯರು ನಿರ್ಧರಿಸಿದ್ದಾರೆ. 78 ಪ್ರತಿಶತ ನಾಗರಿಕರು ಚೀನಾದ ಆಮದಿನ ಮೇಲೆ ಶೇ.200ರಷ್ಟು ಸುಂಕ ವಿಧಿಸುವ ಸರ್ಕಾರದ ತೀರ್ಮಾನ ಬೆಂಬಲಿಸುವುದಾಗಿ ಹೇಳಿದ್ದಾರೆ.
90 ಪ್ರತಿಶತದಷ್ಟು ಭಾರತೀಯರು ಚೀನಾ ಮೂಲದ ಎಲ್ಲಾ ಉತ್ಪನ್ನಗಳು ದೇಶದೊಳಗೆ ಮಾರಾಟ ಮಾಡಲು ಬಿಐಎಸ್, ಸಿಆರ್ಎಸ್, ಸಿಡಿಎಸ್ಸಿಒ, ಎಫ್ಎಸ್ಎಸ್ಎಐ ಅಥವಾ ಈ ಸಂಬಂಧಿತ ಭಾರತೀಯ ಮಾನದಂಡಗಳ ಪ್ರಮಾಣೀಕರವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ತಾಕೀತು ಮಾಡಿದ್ದಾರೆ.
ಚೀನಾದ ಕಂಪನಿಗಳಾದ ಶಿಯೋಮಿ, ಒಪ್ಪೊ, ವಿವೊ, ಒನ್‌ಪ್ಲಸ್, ಕ್ಲಬ್ ಫ್ಯಾಕ್ಟರಿ, ಅಲೈಕ್ಸ್ ಎಕ್ಸ್ಪ್ರೆಟ್, ಶೀನ್, ಟಿಕ್ಟಾಕ್, ವೀಚಾಟ್ ಇತ್ಯಾದಿಗಳ ಉತ್ಪನ್ನ ಮತ್ತು ಸೇವೆಗಳನ್ನು ಖರೀದಿ/ಬಳಕೆಯನ್ನು ಬಹಿಷ್ಕರಿಸಲು ಅವರು ಸಿದ್ಧರಿದ್ದೀರಾ ಎಂದು ಸಮೀಕ್ಷೆಯಲ್ಲಿ ಕೇಳಲಾಯಿತು. ಇದರಲ್ಲಿ ಶೇ.58ರಷ್ಟು ಜನ 'ಹೌದು, ಈಗಿನಿಂದ ಖರೀದಿಸುವುದಿಲ್ಲ ಎಂದಿದ್ದಾರೆ. ಆದರೆ, ಶೇ.39ರಷ್ಟು ಜನರು' ಹೌದು, 'ಈಗಿನಿಂದ ಖರೀದಿಸುವುದಿಲ್ಲ. ನಾನು ಈಗಾಗಲೇ ಖರೀದಿಸಿದ್ದನ್ನು ಬಳಸಬೇಕಾಗುತ್ತದೆ'ಎಂದು ಪ್ರತಿಕ್ರಿಯಿಸಿದ್ದಾರೆ.
97 ಪ್ರತಿಶತದಷ್ಟು ಭಾರತೀಯರು ಚೀನಾದ ಪ್ರಮುಖ ಬ್ರಾಂಡ್‌ಗಳನ್ನು ಖರೀದಿಸುವುದನ್ನು ಬಹಿಷ್ಕರಿಸುವುದಾಗಿ ಹೇಳುತ್ತಾರೆ. ಬದಲಾಗಿ ಭಾರತೀಯ ಬ್ರ್ಯಾಂಡ್‌ಗಳನ್ನು ಬೆಂಬಲಿಸುವ ಆಕಾಂಕ್ಷೆ ಇರಿಸಿಕೊಂಡಿದ್ದಾರೆ. ಕಳೆದ ಹಲವು ದಶಕಗಳಲ್ಲಿ ಚೀನಾದ ಆರ್ಥಿಕ ವಿಸ್ತರಣೆಯಲ್ಲಿ ಈ ಕಂಪನಿಗಳ ಪಾತ್ರ ಮಹತ್ವದಾಗಿದೆ. ಭಾರತವು ಅನೇಕ ದೊಡ್ಡ ಚೀನಾ ಕಂಪನಿಗಳಿಗೆ ಆಯಕಟ್ಟಿನ ಮಾರುಕಟ್ಟೆಯಾಗಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮುಖ ವಿಭಾಗಗಳಲ್ಲಿ ಸ್ಮಾರ್ಟ್‌ಫೋನ್, ಟೆಲಿಕಾಂ ಉಪಕರಣ, ಟೆಲಿವಿಷನ್, ಗೃಹೋಪಯೋಗಿ ವಸ್ತುಗಳು, ಆಟೋ ಘಟಕಗಳು, ಫಾರ್ಮಾ ಪದಾರ್ಥಗಳು ಸೇರಿವೆ.
ಹುತಾತ್ಮರಾದ ಸೈನಿಕರಿಗೆ ಗೌರವ ಸೂಚಕವಾಗಿ ಭಾರತೀಯ ಗ್ರಾಹಕರು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ಚೀನಾದ ಇತ್ತೀಚೆಗಿನ ಗಡಿ ತಂಟೆಯಿಂದ ಸ್ವಾವಲಂಬಿ ಭಾರತದ ಆತ್ಮನಿರ್ಭರ್ ಭಾರತ ಅಭಿಯಾನದ ಕೂಗು ಬಲವಾಗಿ ಕೇಳಿ ಬರುತ್ತಿದೆ. ಒಂದು ತಿಂಗಳ ಹಿಂದೆಯೇ ಕೋವಿಡ್-19 ಪ್ಯಾಕೇಜ್ ಘೋಷಣೆ ವೇಳೆ ಮೊಳಗಿದ ಈ ಘೋಷಣೆ ದೇಶಾದ್ಯಂತ ಹಬ್ಬುತ್ತಿದೆ.