ನವದೆಹಲಿ: 2021-22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದು, ಈ ಬಾರಿ ವಿಧಾನಸಭಾ ಚುನಾವಣೆಗಳು ನಡೆಸಲಿರುವ ರಾಜ್ಯಗಳ ಅಭಿವೃದ್ಧಿಗೆ ಬಂಪರ್ ಆಫರ್ ನೀಡಿದ್ದಾರೆ.
ಈ ವರ್ಷ ಕೇರಳ, ತಮಿಳುನಾಡು, ಅಸ್ಸೋಂ, ಪಶ್ಚಿಮ ಬಂಗಾಳ ಹಾಗೂ ಪುದುಚೆರಿ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಹುಶಃ ಇದನ್ನೇ ಗಮನದಲ್ಲಿಟ್ಟುಕೊಂಡು ಈ ರಾಜ್ಯಗಳಿಗೆ ವಿಶೇಷ ಯೋಜನೆಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
2022 ರೊಳಗಾಗಿ 8,500 ಕಿ.ಮೀ ಹೆದ್ದಾರಿ ನಿರ್ಮಾಣ ಯೋಜನೆ ಗುರಿ ಹೊಂದಿರುವುದಾಗಿ ಸಚಿವರು ಹೇಳಿದ್ದು, ಕೇರಳ, ತಮಿಳುನಾಡು, ಅಸ್ಸೋಂ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಸ್ತೆ ಮೂಲಸೌಕರ್ಯಗಳನ್ನು ಹೆಚ್ಚಿಸಲು ಮುಂದಾಗಿದ್ದಾರೆ. ಇದಕ್ಕಾಗಿ ನೀಡಿದ ಅನುದಾನ ಹೀಗಿದೆ.
- ಕೇರಳದಲ್ಲಿ 65,000 ಕೋಟಿ ರೂ.ಗಳ 1,100 ಕಿ.ಮೀ ಹೆದ್ದಾರಿ ಯೋಜನೆ
- ಪಶ್ಚಿಮ ಬಂಗಾಳದಲ್ಲಿ 25 ಸಾವಿರ ಕೋಟಿ ರೂ.ಗಳ 675 ಕಿ.ಮೀ ಹೆದ್ದಾರಿ ಯೋಜನೆ
- ತಮಿಳುನಾಡಿನಲ್ಲಿ 1 ಲಕ್ಷ ಕೋಟಿ ರೂ. ಗಳ 3,500 ಕಿ.ಮೀ ಹೆದ್ದಾರಿ ಯೋಜನೆ
- ಅಸ್ಸೋಂನಲ್ಲಿ 3,400 ಕೋಟಿ ರೂ.ಗಳ ಹೆದ್ದಾರಿ ಯೋಜನೆ