ನವದೆಹಲಿ : ಉಡಾನ್ ನಾಲ್ಕನೇ ಹಂತದಲ್ಲಿ ಪ್ರಾದೇಶಿಕ ಸಂಪರ್ಕ ಯೋಜನೆಯಡಿ 78 ಹೆಚ್ಚುವರಿ ಮಾರ್ಗಗಳಿಗೆ ಅನುಮೋದನೆ ನೀಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಉಡಾನ್ ಯೋಜನೆಯಡಿ ಸ್ಥಗಿತಗೊಂಡಿರುವ ಮತ್ತು ಕಡಿಮೆ ವಿಮಾನಗಳು ಸಂಚರಿಸುವ ವಿಮಾನ ನಿಲ್ದಾಣಗಳಿಂದ ಕಾರ್ಯಾಚರಣೆ ಆರಂಭಿಸಲು ಮತ್ತು ಟಿಕೆಟ್ ದರ ಕೈಗೆಟಕುವಂತೆ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ವಿಮಾನ ನಿಲ್ದಾಣಗಳಿಂದ ಆರ್ಥಿಕ ಸಹಾಯ ಒದಗಿಸಲಾಗುವುದು ಎಂದು ಪುರಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿಡುವ ಅವರು, ಉಡಾನ್ 4.0 ಕಾರ್ಯಾಚರಣೆಗೆ ಸಿದ್ದವಾಗಿದೆ. 78 ಹೆಚ್ಚುವರಿ ಮಾರ್ಗಗಳನ್ನು ಅನುಮೋದಿಸಲಾಗಿದೆ. ಒಟ್ಟು ಮಂಜೂರಾದ ಮಾರ್ಗಗಳು 766, ಒಟ್ಟು 18 ಅಸುರಕ್ಷಿತ ಮತ್ತು ಕಡಿಮೆ ವಿಮಾನ ಹಾರಾಟ ಮಾಡುವ ನಿಲ್ದಾಣಗಳಿಂದ ದೆಹಲಿ, ಕೋಲ್ಕತ್ತಾ, ಕೊಚ್ಚಿ ಮುಂತಾದ ಮೆಟ್ರೋ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಎಂದು ತಿಳಿಸಿದ್ದಾರೆ.
ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸಲು ಮೋದಿ ಸರ್ಕಾರ 2016 ರಲ್ಲಿ ಉಡಾನ್ ಯೋಜನೆ ಪ್ರಾರಂಭಿಸಿತ್ತು. ಉಡಾನ್ ವಿಮಾನಗಳಲ್ಲಿ ಅರ್ಧದಷ್ಟು ಆಸನಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಈ ವೆಚ್ಚವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಂಚಿಕೊಳ್ಳುತ್ತದೆ.