ನವದೆಹಲಿ: ಜನಸಾಮಾನ್ಯರ ನಿತ್ಯದ ಜೀವನದ ಮೇಲೆ ಪ್ರಮುಖ ಪರಿಣಾಮ ಬೀರುವ ಹಲವು ಹಣಕಾಸಿನ ನಿಯಮಗಳು ಮಾರ್ಚ್ 1ರಿಂದ ಬದಲಾಗಿವೆ. ಈ ನಿಯಮಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದರ, ಇಂಧನ ಬೆಲೆ, ಎಟಿಎಂ ಕ್ಯಾಶ್ ವಿತ್ಡ್ರಾ, ಫಾಸ್ಟ್ಟ್ಯಾಗ್ ಸೇರಿವೆ.
ಮಾರ್ಚ್ 1ರ ಸೋಮವಾರದಿಂದ ಹಲವು ಹೊಸ ನಿಯಮಗಳು ಮತ್ತು ನಡಾವಳಿಗಳು ಜಾರಿಗೆ ಬರಲಿವೆ. ಇವು ಜನರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ದೇಶಾದ್ಯಂತ ಸಂಬಳ ಪಡೆಯುವ ವರ್ಗದವರು ಇದಕ್ಕೆ ಹೊರತಾಗಿಲ್ಲ. 2021ರ ಹೊಸ ತಿಂಗಳು ಮಾರ್ಚ್ ಪ್ರಾರಂಭವಾಗುತ್ತಿದ್ದಂತೆ ಬದಲಾಗಲಿರುವ ಕೆಲವು ವಿಷಯಗಳು ಇಲ್ಲಿವೆ.
ಎಲ್‌ಪಿಜಿ ದರ:ಪ್ರತಿ ತಿಂಗಳ ಮೊದಲ ದಿನ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಅಡುಗೆ ಅನಿಲ ಸಿಲಿಂಡರ್‌ಗಳ ಹೊಸ ದರಗಳನ್ನು ಪ್ರಕಟಿಸುತ್ತವೆ. ಫೆಬ್ರವರಿಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯ ನಡುವೆ ಮೂರು ಬಾರಿ ಬೆಲೆ ಪರಿಷ್ಕರಿಸಲಾಯಿತು. ತೈಲ ಕಂಪನಿಗಳು ಅಡುಗೆ ಅನಿಲದ ಸಿಲಿಂಡರ್ ಮೇಲೆ 25 ರೂ. ಮತ್ತು ವಾಣಿಜ್ಯ ಸಿಲಿಂಡರ್‌ಗೆ 95 ರೂ.ಯಷ್ಟು ಹೆಚ್ಚಿಸಿದ್ದು, ಪರಿಷ್ಕೃತ ಬೆಲೆ ಇಂದಿನಿಂದ ಜಾರಿಗೆ ಬರಲಿವೆ.
ಇಂಧನ ದರಗಳು : ಇಂಧನದ ಚಿಲ್ಲರೆ ದರವನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಆದರೆ, ಕಚ್ಚಾ ತೈಲ ಬೆಲೆ ಏರಿಕೆಯ ಮಧ್ಯೆ ಭಾರತದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 'ಚಳಿಗಾಲ ಮುಗಿಯುತ್ತಿದ್ದಂತೆ ದೇಶದಲ್ಲಿ ಬೆಲೆ ಕಡಿಮೆಯಾಗಲಿದೆ' ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದರು.
ತೈಲ ಮಾರುಕಟ್ಟೆ ಕಂಪನಿಗಳು ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಪಂಪ್ ಬೆಲೆಯನ್ನು ಬದಲಾವಣೆ ಮಾಡದೇ ಯಥಾವತ್ತಾಗಿ ಇರಿಸಿಕೊಂಡಿವೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ 91.17 ಮತ್ತು ಡೀಸೆಲ್ ಲೀಟರ್ 81.47 ರೂ.ಯಲ್ಲಿ ಮಾರಾಟ ಆಗುತ್ತಿದೆ.