ಮುಂಬೈ:ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರದ ನಿರ್ಧಾರ, ಬ್ರೆಕ್ಸಿಟ್ ಒಪ್ಪಂದದ ಬೆಳವಣಿಗೆ ಮತ್ತು ಡಾಲರ್ ಎದುರು ಬಲವರ್ಧನೆಗೊಂಡ ರೂಪಾಯಿ ಮೌಲ್ಯ ಸೇರಿದಂತೆ ಇತರೇ ಅಂಶಗಳನ್ನು ಅನುಸರಿಸಿದ್ದ ಭಾರತೀಯ ಷೇರು ಮಾರುಕಟ್ಟೆಯು ಕಳೆದ ವಾರ ಭಾರಿ ಏರಿಕೆ ಕಂಡಿತ್ತು. ಇಂತಹದೆ ಐದು ಅಂಶಗಳು ಗೂಳಿ- ಕರಡಿಯ ಜಿದ್ದಾಜಿದ್ದಿಗೆ ಮುಂದಿನ ವಾರದ ಪೇಟೆ ವೇದಿಕೆ ಆಗಲಿದೆ.
ಎಫ್&ಒ ಎಕ್ಸ್ಪೈರಿ:
ದೇಶಿಯ ಮಾರುಕಟ್ಟೆಯಲ್ಲಿ ವಾರದ ಹಿಂದೆ ಚಂಚಲತೆಯ ಸ್ಪರ್ಧೆಯೊಡ್ಡಿದ್ದ ಮಾರ್ಚ್ ಸರಣಿಯ ಫ್ಯೂಚರ್ ಆ್ಯಂಡ್ ಆಪ್ಷನ್ಸ್ (ಎಫ್&ಒ) ಕರಾರು ಗುರುವಾರ ಮುಕ್ತಾಯವಾಗಲಿದೆ. ಹೀಗಾಗಿ, ಹೂಡಿಕೆದಾರರು ಏಪ್ರಿಲ್ ಸರಣಿಯ ಮೇಲೆ ನಿಗಾವಹಿಸಿದ್ದಾರೆ. ಶುಕ್ರವಾರದ ಪೇಟೆಯಲ್ಲಿ ನಿಫ್ಟಿ ಶೇ 0.65ರಷ್ಟು ಕುಸಿತಕಂಡು, 11,478 ಅಂಶಗಳಲ್ಲಿ ವಹಿವಾಟು ನಡೆಸಿತ್ತು. ನಿಫ್ಟಿ ಮುಂದಿನ ವಾರ ಕನಿಷ್ಠ 11,222 ಹಾಗೂ ಗರಿಷ್ಠ 11,600 ಅಂಶಗಳ ನಡುವೆ ವಹಿವಾಟು ನಡೆಸಬಹುದೆಂದು ಅಂದಾಜಿಸಲಾಗಿದೆ.
ಬೃಹತ್ ಆರ್ಥಿಕತೆದತ್ತಾಂಶ ಬಿಡುಗಡೆ:
ಮುಂದಿನ ವಾರದಲ್ಲಿ ಪ್ರಸ್ತುತ ದೇಶದ ಆರ್ಥಿಕತೆಯ ಕುರಿತ ಎರಡು ದತ್ತಾಂಶಗಳ ವರದಿ ಹೊರಬರಲಿವೆ. ಫೆಬ್ರವರಿ ತಿಂಗಳ ಹಣಕಾಸು ಕೊರತೆ ಮತ್ತು ಮೂಲಭೂತ ಸೌಕರ್ಯಗಳ ಡೇಟಾ ಮಾಹಿತಿ ಶುಕ್ರವಾರ ಬಿಡುಗಡೆಯಾಗಲಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ, ಶುದ್ಧೀಕರಣದ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ನಂತಹ ಎಂಟು ಮೂಲಸೌಕರ್ಯ ವಲಯಗಳು ಜನವರಿಯಲ್ಲಿ ಶೇ1.8ರಷ್ಟು ಅಲ್ಪ ಪ್ರಮಾಣದ ಏರಿಕೆ ಕಂಡಿದ್ದವು. ಅದರಲ್ಲಿ ಮುಖ್ಯವಾಗಿ ಕಚ್ಚಾ ತೈಲ, ಶುದ್ಧೀಕರಣದ ಉತ್ಪನ್ನ ಮತ್ತು ಇಂಧನ ವಲಯ ಕುಸಿತ ಕಂಡಿದ್ದವು. ನಾಲ್ಕನೇ ತ್ರೈಮಾಸಿಕದ ದತ್ತಾಂಶದಲ್ಲಿ ವಿದೇಶಿ ಸಾಲ ಮತ್ತು ಚಾಲ್ತಿ ಖಾತೆಗಳ ಡೇಟಾ ಸಹ ಮಾರುಕಟ್ಟೆಯ ಗಮನ ಸೆಳೆಯಲಿದೆ.