ಬೆಂಗಳೂರು:ನಿಯಂತ್ರಕ ಕಾರ್ಯವಿಧಾನಗಳ ವೈಫಲ್ಯ, ಮೇಲ್ವಿಚಾರಣೆಯ ಕೊರತೆ, ನ್ಯಾಯಾಲಯದ ಹಸ್ತಕ್ಷೇಪ ಮತ್ತು ನಿರಂತರವಾಗಿ ಮುಚ್ಚುತ್ತಿರುವ ಗಣಿಗಳಿಂದಾಗಿ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಗಣಿಗಾರಿಕೆ ಕ್ಷೇತ್ರದಲ್ಲಿ ನೇರ ಮತ್ತು ಪರೋಕ್ಷವಾಗಿ 12.8 ಲಕ್ಷ ಉದ್ಯೋಗಗಳು ಕಡಿತಗೊಂಡಿವೆ ಎಂದು ಉದ್ಯಮದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಬುಧವಾರ ತಿಳಿಸಿದ್ದಾರೆ.
ಕೃಷಿ ಮತ್ತು ನಿರ್ಮಾಣದ ನಂತರ ಗಣಿಗಾರಿಕೆ ವಲಯವು ಮೂರನೇ ಅತಿದೊಡ್ಡ ಉದ್ಯೋಗ ನೀಡುವ ವಲಯವಾಗಿದೆ. ಗಣಿಗಳ ಸ್ಥಗಿತತೆ, ನಿಯಂತ್ರಕ ಕಾರ್ಯವಿಧಾನದ ವೈಫಲ್ಯ ಮತ್ತು ಮೇಲ್ವಿಚಾರಣೆಯ ಕೊರತೆಯಿಂದಾಗಿ ಕರ್ನಾಟಕ ಮತ್ತು ಗೋವಾದಲ್ಲಿ 2011-12ರಿಂದ ಇಲ್ಲಿಯವರೆಗೆ ನೇರ ಮತ್ತು ಪರೋಕ್ಷವಾಗಿ 12,80,000 ಉದ್ಯೋಗಗಳು ನಷ್ಟವಾಗಿವೆ. ಭೂ ವ್ಯಾಜ್ಯಗಳ ವಿಚಾರಣೆ ಮತ್ತು ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆಯೂ ಕೂಡ ಇದಕ್ಕೆ ಮುಖ್ಯ ಕಾರಣವೆಂದು ಫೆಡರೇಷನ್ ಆಫ್ ಇಂಡಿಯನ್ ಮಿನರಲ್ಸ್ ಇಂಡಸ್ಟ್ರೀಸ್ (ಫಿಮಿ) ಅಧ್ಯಕ್ಷ ಸುನಿಲ್ ದುಗ್ಗಲ್ ತಿಳಿಸಿದ್ದಾರೆ.