ಮಂಗಳೂರು: ಕೇರಳ ರಾಜ್ಯದಲ್ಲಿ ಸಂಚರಿಸುತ್ತಿರುವ ಬೈಕ್ಗೆ ನಾಯಿಯೊಂದನ್ನು ಕಟ್ಟಿ ಎಳೆದೊಯ್ಯುವ ಅಮಾನವೀಯ ಘಟನೆ ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಅಂತಹದೇ ಘಟನೆ ಮಂಗಳೂರಿನಲ್ಲಿಯೂ ನಡೆದಿದೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.
ಬೈಕ್ಗೆ ನಾಯಿಕಟ್ಟಿ ಎಳೆದೊಯ್ದ ಕಿರಾತಕರು ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಗರದ ಸುರತ್ಕಲ್ನ ಎನ್ಐಟಿಕೆ ಬಳಿಯ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಕೆಳ ರಸ್ತೆಯಲ್ಲಿ ನಾಯಿಯೊಂದನ್ನು ಬೈಕ್ ಹಿಂದಕ್ಕೆ ಹಗ್ಗದಿಂದ ಕಟ್ಟಿ ಸವಾರರಿಬ್ಬರು ಬೈಕ್ ಚಲಾಯಿಸುತ್ತಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಈ ಘಟನೆ ಎ.15ರಂದು ರಾತ್ರಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸವಾರರು ಈ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಗಳ ಬಂಧನ ಆಗಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿಯವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನಾಯಿಯನ್ನು ಹಿಂಸಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.