ಬೆಂಗಳೂರು:ರಾಜಧಾನಿಯಲ್ಲಿ 23 ವರ್ಷದ ಯುವಕನೊಬ್ಬ ಕೊರೊನಾದಿಂದ ಮೃತಟ್ಟಿರುವ ಕುರಿತು ವರದಿಯಾಗಿದ್ದು, ಇದು ಆರೋಗ್ಯ ಇಲಾಖೆಗೆ ಸವಾಲೊಡ್ಡಿದೆ.
ಯುವಕ ಜ್ವರ, ವಾಂತಿ-ಭೇದಿ, ಡಯಾಬಿಟಿಸ್ನಿಂದ ಬಳಲುತ್ತಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾನೆ. ಇಂದು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಪರಶುರಾಮ್ ಮಾಹಿತಿ ನೀಡಿದರು.
ಈ ಯುವಕ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ಡೌನ್ ಬಳಿಕ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಈ ನಡುವೆ ಮನೆ ಬಾಡಿಗೆ ಹೆಚ್ಚಾದ ಕಾರಣ ಹದಿನೈದು ದಿನಗಳ ಹಿಂದಷ್ಟೇ ಶಿವಾಜಿನಗರದಿಂದ ಜೆಸಿ ನಗರಕ್ಕೆ ಮನೆ ಬದಲಾಯಿಸಿಕೊಂಡು ವಾಸವಾಗಿದ್ದರು.
ಜ್ವರ, ವಾಂತಿ-ಭೇದಿಯಿಂದ ಬಳಲುತ್ತಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈತನಿಗೆ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದು, ಕೊರೊನಾ ಬಂತೆಂಬ ಭಯದಿಂದ ಹೀಗಾಗಿರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಯುವಕನ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿದೆ. ಮನೆ ಸದಸ್ಯರು ಯುವಕನ ದ್ವಿತೀಯ ಸಂಪರ್ಕ ಹೊಂದಿದ್ದವರ ಕುರಿತು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.